ಯಡಿಯೂರಪ್ಪ ಕಾಂಗ್ರೆಸ್ ಸೇರ್ಪಡೆ ಮೊಯ್ಲಿ ಏನಂದರು?

ಯಡಿಯೂರಪ್ಪನವರು ಕಾಂಗ್ರೆಸ್ ಪಕ್ಷ ಮತ್ತು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್‌ರನ್ನು ಹೊಗಳುತ್ತಿದ್ದಾರೆ. ಈ ಬಗ್ಗೆ ಏನು ಹೇಳುವಿರಿ ಎಂದು ಪತ್ರಕರ್ತರು ಪ್ರಶ್ನಿಸಿದರು.
'ಇದೆಲ್ಲ ಪಕ್ಷದ ಆಂತರಿಕ ವಿಚಾರವಾಗಿದ್ದು, ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ರಾಜ್ಯದ ಜನತೆ ಶುದ್ಧ ಮತ್ತು ಭ್ರಷ್ಟಾಚಾರ ರಹಿತ ಸರಕಾರವನ್ನು ಬಯಸುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಸಂಘಟಿತ ಪ್ರಯತ್ನ ಮಾಡುತ್ತದೆ. ಈ ಸಂದರ್ಭ ಪಕ್ಷಕ್ಕೆ ಶಕ್ತಿ ತುಂಬಲು ಯಾರೇ ಬಂದರೂ ಸ್ವಾಗತಿಸುತ್ತೇವೆ' ಎಂದರು.
ಅಂದರೆ, ಯಡಿಯೂರಪ್ಪ ಒಂದು ಶಕ್ತಿ ಎಂದು ಭಾವಿಸುವಿರಾ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ ಮೊಯ್ಲಿ ಅದಕ್ಕೆ ಸ್ಪಷ್ಟ ಉತ್ತರ ನೀಡದೆ ನುಣಚಿಕೊಂಡರು.
ಬಜ್ಪೆ ವಿಮಾನ ನಿಲ್ದಾಣ ಅಕ್ಟೋಬರ್ ಅಂತ್ಯಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟ್ಯಾಗ್ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ರವಿವಾರ ಹಜ್ ಯಾತ್ರಿಕರನ್ನು ಬೀಳ್ಕೊಡಲು ಬಜ್ಪೆ ಕೆಂಜಾರು ವಿಮಾನ ನಿಲ್ದಾಣಕ್ಕೆ ಮೊಯ್ಲಿ ಆಗಮಿಸಿದ್ದರು.
ಕಾವೇರಿ ವಿವಾದ: ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಉಂಟಾಗಿರುವ ಕಾವೇರಿ ನದಿ ನೀರಿನ ವಿವಾದಕ್ಕೆ ಮಾತುಕತೆ ಮೂಲಕ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಈಗಾಗಲೆ ಪ್ರಧಾನಿ ಅಧ್ಯಕ್ಷತೆಯಲ್ಲಿ ಕಾವೇರಿ ನದಿ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡಲು ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ ಕೂಡ ಆದೇಶಿಸಿದೆ. ಹಾಗಾಗಿ ಅದನ್ನು ಕರ್ನಾಟಕ ಪಾಲಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮೊಯ್ಲಿ ಹೇಳಿದರು.
ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರ ವಾದ ಮಂಡಿಸಿದ ವಕೀಲರ ವೈಫಲ್ಯದಿಂದ ರಾಜ್ಯಕ್ಕೆ ಹಿನ್ನಡೆಯಾಗಿದೆ ಇದಕ್ಕೆ ಏನು ಹೇಳುತ್ತಿರಾ? ಎಂಬ ಪ್ರಶ್ನೆಗೆ ಮೊಯ್ಲಿ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿದರು.












Click it and Unblock the Notifications