ಸಿಎಂ ಶೆಟ್ಟರ್ ಜಯಾಗೆ ನೀರು ಕೊಡ್ತಾರಾ, ಕುಡಿಸ್ತಾರಾ?

2002ರಲ್ಲೂ ಅಂದಿನ ಸಿಎಂ ಕೃಷ್ಣ ಇಂಥಹುದೇ ಸಂದಿಗ್ಧ ಪರಿಸ್ಥಿತಿಯಲ್ಲಿದ್ದರು. ಆವತ್ತೂ ಹಾಗೇ. ಮೊದಲು 9 ಸಾವಿರ ಕ್ಯುಸೆಕ್ಸ್ ನೀರನ್ನು ಬಿಟ್ಟುಬಿಡಿ ಎಂದಿತ್ತು ಇದೇ ಸು. ಕೋರ್ಟ್. ಆದರೆ ಮಂಡ್ಯದ ಎಸ್ಎಂ ಕೃಷ್ಣ ವಸಿ ಧೈರ್ಯ ತಂದುಕೊಂಡರು. ಎಲ್ಲರನ್ನೂ ಕರೆದುಕೊಂಡು ಕಾವೇರಿ ನದಿಗಂಟ ಪಾದಯಾತ್ರೆ ಆರಂಭಿಸಿಯೇ ಬಿಟ್ಟರು. ಆದರೆ ಸು. ಕೋರ್ಟ್ ಅವರ ಬೆನ್ನುಹತ್ತಿತು. ಮತ್ತೆ ಅದೇ ರಾಗ ಹಾಡಿತು ಮೊದಲು ನೀರು ಬಿಡಿ ಎಂದಿತು. ಕೃಷ್ಣ ತೆಪ್ಪಗೇ ನೀರು ಬಿಟ್ಟರು.
ಇತಿಹಾಸ ಪುನರಾವರ್ತನೆಯಾಗಲಿದೆಯಾ? ಆಗ ಕೃಷ್ಣ ಪಾದಯಾತ್ರೆ ಮಾಡಿದ್ದೂ ರಾಜಕೀಯಕ್ಕೇ. ಇಂದು ಚುನಾವಣೆ ವರ್ಷದಲ್ಲಿ ಶೆಟ್ಟರ್ ಏನು ಮಾಡುತ್ತಾರೆ? ಇದಕ್ಕೆ ಸ್ವತಃ ಮುಖ್ಯಮಂತ್ರಿ ಶೆಟ್ಟರ್ ಅವರೇ, ಕೆಲವೇ ಕ್ಷಣಗಳಲ್ಲಿ ಉತ್ತರಿಸಲೇಬೇಕು. ಏಕೆಂದರೆ ಇಂದಿನಿಂದಲೇ ಮೊದಲು ನೀರು ಬಿಡಬೇಕು. ಆಮೇಲಿನದು ಮಾತು, ಕತೆ.
ಹಾಗಾದರೆ ಸರಕಾರ ಏನು ನಿರ್ಧಾರ ತೆಗೆದುಕೊಳ್ಳುತ್ತದೆ? ಎಂಬುದು ಕುತೂಹಲದ ಪ್ರಶ್ನೆ ಅಲ್ಲ, ಇದು ಇಲ್ಲಿನ ಸಾವಿರಾರು ರೈತರು ಮತ್ತು ಲಕ್ಷಾಂತರ ಜನರ ಜೀವ ಜಲದ ಪ್ರಶ್ನೆ.
ಈ ಮಧ್ಯೆ ತೀರ್ಪು ಹೊರಬೀಳುತ್ತಿದ್ದಂತೆ right place ನಲ್ಲಿಯೇ ಇದ್ದ ಅಂದರೆ ಇಂತಹ ಸೂಕ್ಷ್ಮ ವಿಚಾರಗಳಲ್ಲಿ ಒಬ್ಬಿಬ್ಬರು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಇಡೀ ಸರಕಾರವೋ ಅಥವಾ ಇಡೀ ಪಕ್ಷವೋ ಒಮ್ಮತದ ನಿರ್ಧಾರ ತೆಗೆದುಕೊಂಡರೆ ನಾಡಿಗೆ ಒಳಿತು. ಹಾಗಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ವೇದಿಕೆಯಲ್ಲೇ ಇದ್ದ ನಮ್ಮ ಧೀಮಂತ ನಾಯಕರು ಅಲ್ಲಿಂದಲೇ ಮುಂದೇನು ಎಂಬುದನ್ನು ನಿರ್ಧರಿಸಿದ್ದರೆ ತುಂಬಾ ಒಳ್ಳೆಯದು. ಅದರ ಜತೆಗೆ ಇಲ್ಲೂ ಇಂದು ಸರ್ವ ಪಕ್ಷ್ಳ ಸಭೆ ನಡೆಸಿ, yes ನಾವು ಮಾಡುವುದು ಹೀಗೇ ಅಂದುಬಿಟ್ಟರೆ ಸರಿಹೋದೀತು.
ಈಶ್ವರಪ್ಪ ಹೇಳಿದ್ದೇನು?: ಸುಪ್ರೀಂಕೋರ್ಟ್‌ನ ಬಗ್ಗೆ ಅಪಾರ ಗೌರವವಿದೆ ಎಂದು ಹೇಳುತ್ತಲೇ ರಾಜ್ಯ ಸರಕಾರದಿಂದಾದ ಆಗಿರುವ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ. ರಾಜ್ಯದಲ್ಲಿನ ವಸ್ತು ಸ್ಥಿತಿಯನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಸುವಲ್ಲಿ ರಾಜ್ಯದ ಪರ ವಕೀಲರು ವಿಫಲರಾಗಿದ್ದಾರೆ. ಹಾಗಾಗಿ ನಮಗೆ ಹಿನ್ನಡೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಕೆಎಸ್.. ಈಶ್ವರಪ್ಪ ಹೇಳಿದ್ದಾರೆ. ಇದು ಹೇಗಿದೆಯೆಂದರೆ, ನೀರೆಲ್ಲ ಕೊಳ್ಳೆ ಹೊಡೆದ ಮೇಲೆ ಕೆಆರ್ ಎಸ್ ಗೇಟುಗಳನ್ನು ಬಂದ್ ಮಾಡಿದರಂತೆ ಎಂಬಂತೆ!
ಅಷ್ಟೇ ಅಲ್ಲ 'ನಮಗೇ ಕುಡಿಯಲು ನೀರಿಲ್ಲ, ಇನ್ನು ತಮಿಳುನಾಡಿಗೆ ಎಲ್ಲಿಂದ ನೀರು ಕೊಡುವುದು. ತಮಿಳುನಾಡು ಈ ವರ್ಷದ ಬೆಳೆಗೆ ನೀರು ಇಟ್ಟುಕೊಂಡಡೂ, ಮುಂದಿನ ವರ್ಷದ ಬೆಳೆಗೆ ನೀರು ಕೇಳುತ್ತಿದೆ. ಈ ಬಗ್ಗೆ ನಾವು ಮರು ಪರಿಶೀಲನಾ ಅರ್ಜಿ ಹಾಕಲಿದ್ದೇವೆ' ಎಂದಿದ್ದಾರೆ. ಯಾವಾಗ ಇವರಿಗೆ ಬುದ್ಧಿ ಬರುತ್ತದೋ, ಯಾವಾಗ ನಮಗೆ ನ್ಯಾಯ ದಕ್ಕುತ್ತದೋ ಆ ಕಾವೇರಿ ಮಾತೆಯೇ ಹೇಳಬೇಕು.
ಮರೆತ ಮಾತು: ಅತ್ತ ಕಾವೇರಿ ನದಿ ನೀರು ವ್ಯಾಜ್ಯಕ್ಕೆ ಬೆಂಕಿ ಬಿದ್ದಿರುವಾಗ ನಮ್ಮ ಪರ ಪ್ರತಿವಾದ ಮಂಡಿಸಿ, ಕರ್ನಾಟಕಕ್ಕೆ ಅರ್ಹ ನ್ಯಾಯ ದಕ್ಕಿಸಿಕೊಡುವ ಗುರುತರ ಜವಾಬ್ದಾರಿ ಹೊತ್ತ ಸನ್ಮಾನ್ಯ ನ್ಯಾಯವಾದಿ ಪಾಲಿ ಎಸ್ ನಾರಿಮನ್ ಅವರು ನಿನ್ನೆ ಕೋರ್ಟ್ ವಿಚಾರಣೆಗೇ ಹಾಜರಾಗಿಲ್ಲ. ರಾಜ್ಯದ ಪರ ವಿಎನ್... ರಘುಪತಿ ವಾದ ಮಂಡಿಸುವ ಪ್ರಯತ್ನ ನಡೆಸಿದರು.
ಖುದ್ದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಸನ್ಮಾನ್ಯ ನಾರಿಮನ್ ಗೆ ಮನೆಗೆ ಹೋದಾಗ ಆ ಪುಣ್ಯಾತ್ಮ 'ಮೊದಲು ತಮಿಳುನಾಡಿಗೆ ನೀರು ಬಿಟ್ಟು, ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುವಂತೆ' ಎಂದು ಉಚಿತ ಸಲಹೆ ನೀಡಿದ್ದಾರೆ.












Click it and Unblock the Notifications