ಗಂಡು ಮಗುವನ್ನೇ ತೊರೆದು ನಡೆದ ನಿರ್ದಯಿ ತಾಯಿ

ಇಂತಹ ಕರಳು ಕಿವುಚುವ ಘಟನೆಯೊಂದು ಯಾದಗಿರಿ ಜಿಲ್ಲೆಯ ಅಲ್ಲಿಪೂರ್ ಗ್ರಾಮದಲ್ಲಿ ಜರುಗಿದೆ. ಅದೇ ತಾನೆ ಹುಟ್ಟಿದ ಗಂಡು ಮಗುವನ್ನು ಹೃದಯಹೀನ ತಾಯಿಯೊಬ್ಬಳು ಜಮೀನೊಂದರಲ್ಲಿ ಬಿಟ್ಟು ಪಲಾಯನಗೈದಿದ್ದಾಳೆ. ಆದರೆ, ಸಕಾಲದಲ್ಲಿ ಮಗುವನ್ನು ರಕ್ಷಿಸಲಾಗಿದ್ದರಿಂದ ಅದು ಗಂಡು ಸಂತಾನವಿಲ್ಲದ ತಾಯಿಯೊಬ್ಬಳ ಮಡಿಲಲ್ಲಿ ಹೊಸ ಜೀವನವನ್ನು ಕಂಡುಕೊಂಡಿದೆ. ಆ ತಾಯಿಯ ಹೊಟ್ಟೆ ತಣ್ಣಗಿರಲಿ.
ಇಂತಹ ಘಟನೆಗಳು ನಡೆಯುತ್ತಿರುವುದು ನಿಜಕ್ಕೂ ಕಳವಳಕಾರಿ. ಎರಡು ತಿಂಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ ಅಲ್ಲಿಪೂರ ಗ್ರಾಮದಲ್ಲಿಯೇ ಮಗುವನ್ನು ತಾಯಿಯೊಬ್ಬಳು ತ್ಯಜಿಸಿ ಕಾಣೆಯಾಗಿದ್ದ ಘಟನೆ ನಡೆದಿತ್ತು. ಆಗ ಕೂಡ ಗಂಡು ಮಗುವನ್ನೇ ತಾಯಿಯೊಬ್ಬಳು ತೊರೆದಿದ್ದಳು. ಈಗ ಕೂಡ ಗಂಡು ಮಗುವನ್ನು ಕರುಣೆಯಿಲ್ಲದ ತಾಯಿಯೊಬ್ಬಳು ಅನಾಥನನ್ನಾಗಿ ಮಾಡಿದ್ದಾಳೆ.
ಆ ಮಗುವಿನ ತಾಯಿ ಮತ್ತು ತಂದೆ ಯಾರೆಂಬುದು ಇನ್ನೂ ಪತ್ತೆಯಾಗಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಕಳೆದ 3-4 ದಿನಗಳಿಂದ ಕಂದಮ್ಮನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ಪೋಷಕರು ಹೆತ್ತ ಕಂದಮ್ಮನನ್ನು ಪಡೆಯಲು ಬಂದಿಲ್ಲ. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದತ್ತು ಪಡೆಯಲು ಮುಂದೆ ಬಂದ ಕಾಶಮ್ಮ : "ನನಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ ರೀ. ಈ ಮಗುವನ್ನು ನನಗೆ ದತ್ತು ನೀಡಿದರೆ ಒಳ್ಳೆ ರೀತಿಯಿಂದ ಸಾಕುತ್ತೇನೆ. ಶಾಲೆಗೆ ಕಳುಹಿಸಿ ವಿದ್ಯಾವಂತನಾಗಿ ಮಾಡುತ್ತೇನೆ" ಎಂದು ಕಾಶಮ್ಮ ಎಂಬಾಕೆ ಮುಂದೆ ಬಂದಿದ್ದಾಳೆ. ಆದರೆ ವೈದ್ಯರು ಅಥವಾ ಜಿಲ್ಲಾ ಬಾಲಕಿಯರ ಬಾಲಮಂದಿರದ ಅಧೀಕ್ಷಕರು ಈ ಮಗುವನ್ನು ಮಾನವೀಯತೆ ಮೆರೆದ ಕಾಶಮ್ಮನಿಗೆ ನೀಡುತ್ತಾರಾ.. ಎಂಬುದು ಕಾದು ನೋಡಬೇಕಾಗಿದೆ.












Click it and Unblock the Notifications