ದುಬೈ ವಿಮಾನದಲ್ಲಿ 8 ಕೆಜಿ ಚಿನ್ನ ಕದ್ದು ತಂದ ಭೂಪ

ಏನಪಾ ಅಂದರೆ... ಸಾಮಾನ್ಯವಾಗಿ ದುಬೈಗೆ ಹೋದ ಕೆಲವರು ವಾಪಸಾಗುವಾಗ ಮೂರೋ-ನಾಲ್ಕೋ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೈಯಲ್ಲೋ ಅಥವಾ ಮತ್ತೆಲ್ಲೋ ಬಚ್ಚಿಟ್ಟುಕೊಂಡು ಬರುತ್ತಾರೆ. ಟ್ಯಾಕ್ಸ್ ತಪ್ಪಿಸಿ, ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಅವರ ಕಾಯಕವೇ ಅದು. ಆದರೆ ಹೀಗೆ ದುಬೈನಿಂದ ವಾಪಸಾಗುವವರು ಇಲೆಕ್ಟ್ರಾನಿಕ್ ಗೂಡ್ಸುಗಳಿಗಿಂತ ಸಲೀಸಾಗಿ ಚಿನ್ನವನ್ನು ಕದ್ದು ತರುತ್ತಿದ್ದಾರೆ.
ನಿನ್ನೆ ಭಾನುವಾರ ಮುಂಜಾನೆ ಏನಾಯಿತೆಂದರೆ ದುಬೈನಿಂದ ಜೈಪುರಕ್ಕೆ ವಿಮಾನವೊಂದು ಹಾರಿಬಂದಿದೆ. ಅದರಲ್ಲಿದ್ದ ಭೂಪನೊಬ್ಬ ತಾನೊಬ್ಬನೇ ಬಾರದೆ ತನ್ನೊಂದಿಗೆ 8 ಕೆಜಿ ಚಿನ್ನವನ್ನು ಅಂದರೆ 2.5 ಕೋಟಿ ರೂ. ಮೌಲ್ಯದ ಚಿನ್ನವನ್ನು ಬಚ್ಚಿಟ್ಟುಕೊಂಡು ತಂದಿದ್ದಾನೆ!
ಆದರೆ ಎಕ್ಸ್ ರೇ ದೃಷ್ಟಿ ನೇರವಾಗಿ ಆ ಚಿನ್ನದ ಮೇಲೆಯೇ ಬಿದ್ದಿದೆ. ಆಮೇಲೆ ಸುಂಕದ ಅಧಿಕಾರಿಗಳು ಅವನನ್ನು ಬಂಧಿಸಿ, ಅಷ್ಟೂ ಚಿನ್ನವನ್ನು ಸ್ವಾಧೀನಪಡಿಸಿಕೊಂಡರು ಅನ್ನಿ. ಸಿಕಾರ್ ಪಟ್ಟಣದ ಮನೋಜ್ ಶರ್ಮಾ ಎಂಬ ಆ ಕಳ್ಳ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಸತ್ಪ್ರಜೆ: ಒಂದೂವರೆ ತಿಂಗಳ ಹಿಂದೆ ಕರ್ನಾಟಕದ ಸತ್ಪ್ರಜೆಯೊಬ್ಬ ಹೀಗೆ ಚಿನ್ನ ಕಳ್ಳಸಾಗಣೆ ಮಾಡಲು ಹೋಗಿ ಸಿಕ್ಕಿಹಾಕಿಕೊಂಡಿದ್ದ. ಸಯ್ಯದ್ ಅಲ್ತಾಫ್ ಎಂಬ ಶಿಖಾಮಣಿ ದುಬೈನಿಂದ ಜೈಪುರಕ್ಕೆ ಒಮಾನ್ ಏರ್ ವೇಸ್ ನಲ್ಲಿ ಬರುವಾಗ ತನ್ನೊಂದಿಗೆ 2.5 ಕೆಜಿ ಚಿನ್ನವನ್ನು ಅಕ್ರಮವಾಗಿ ತಂದಿದ್ದ.












Click it and Unblock the Notifications