ಯಡಿಯೂರಪ್ಪ ಕರ್ನಾಟಕದ ವಾಜಪೇಯಿ: ರೇಣುಕಾಚಾರ್ಯ

ನಿನ್ನೆ ದಿಢೀರ್ ಪತ್ರಿಕಾಗೋಷ್ಠಿ ಮುಗಿಸಿದ ಬಳಿಕ ತಮ್ಮ ಆಪ್ತ ಪಟಾಲಂ ಜತೆ ಮುಂದಿನ ನಡೆ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಮತ್ತು ಸಭೆಯ ನಿರ್ಣಯಗಳನ್ನು ಸೂಕ್ಷ್ಮವಾಗಿ ತಮ್ಮ ಆಪ್ತೇಷ್ಟರ ಮೂಲಕ ಹೊರಗೆಡವಿದ್ದಾರೆ.
ಆ ಪ್ರಯತ್ನದಲ್ಲಿ ಯಡಿಯೂರಪ್ಪನವರ ಅಧಿಕೃತ ವಕ್ತಾರ (ಆಯನೂರು ಮಂಜುನಾಥರನ್ನುಇಂದು ಪಕ್ಷದ ವಕ್ತಾರ ಹುದ್ದೆಯಿಂದ ತೆರವುಗೊಳಿಸಿದ ಬಳಿಕ ಆ ಸ್ಥಾನದ ಮಹಿಮೆ ಹೆಚ್ಚು ಅರಿವಿಗೆ ಬರುತ್ತಿದೆ!) ಅಬಕಾರಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಸನ್ಮಾನ್ಯ ಯಡಿಯೂರಪ್ಪನವರನ್ನು 'ಕರ್ನಾಟಕದ ವಾಜಪೇಯಿ' ಎಂದು ವಾಚಾಮಗೋಚರವಾಗಿ ಹೊಗಳಿದ್ದಾರೆ.
ಶುಕ್ರವಾರ ರಾತ್ರಿ ಡಾಲರ್ಸ್ ಕಾಲೊನಿ ನಿವಾಸದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ರೇಣುಕಾಚಾರ್ಯ, 'ರಾಷ್ಟ್ರಕ್ಕೊಬ್ಬ (ಅಟಲ್ ಬಿಹಾರಿ) ವಾಜಪೇಯಿ ಇರುವಂತೆ ರಾಜ್ಯಕ್ಕೆ ಯಡಿಯೂರಪ್ಪನವರು' ಎಂದಿದ್ದಾರೆ.
'ಯಡಿಯೂರಪ್ಪನವರು ಪಕ್ಷದ ಪ್ರಶ್ನಾತೀತ ನಾಯಕ. ಅವರ ನಾಯಕತ್ವದಲ್ಲೇ ಚುನಾವಣೆ ಎದುರಿಸಬೇಕು. ಇದು ಪಕ್ಷದ ಎಲ್ಲ ಶಾಸಕರು, ಮುಖಂಡರು, ಕಾರ್ಯಕರ್ತರು ಹಾಗೂ ಜನರ ಅಪೇಕ್ಷೆಯಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ನಮಗೆ ನಂಬಿಕೆ ಇಲ್ಲ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಯಡಿಯೂರಪ್ಪ ಅವರಿಗೆ ನಾಯಕತ್ವ ವಹಿಸಬೇಕು' ಎಂದೂ ಎಂಪಿ ರೇಣುಕಾಚಾರ್ಯ ಫರ್ಮಾನು ಹೊರಡಿಸಿದ್ದಾರೆ.
ಸಾಮೂಹಿಕ ನಾಯಕತ್ವ ಎಂದೂ ಯಶಸ್ವಿಯಾಗಿಲ್ಲ. 2008ಕ್ಕಿಂತ ಮುನ್ನ ಸಾಮೂಹಿಕ ನಾಯಕತ್ವದಲ್ಲೇ ಬಿಜೆಪಿ ಚುನಾವಣೆ ಎದುರಿಸಿದ್ದರೂ ಪಕ್ಷ ಏಕೆ ಅಧಿಕಾರಕ್ಕೆ ಬರಲಿಲ್ಲ ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಯಡಿಯೂರಪ್ಪ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರೆ 10 ವರ್ಷ ಮೊದಲೇ ಪಕ್ಷ ಅಧಿಕಾರಕ್ಕೆ ಬರುತ್ತಿತ್ತು. ಇದನ್ನು ರಾಷ್ಟ್ರೀಯ ನಾಯಕರು ಅರ್ಥ ಮಾಡಿಕೊಳ್ಳಬೇಕು' ಎಂದು ಉಚಿತ ಸಲಹೆ ನೀಡಿದರು.
ನಾಲ್ಕು ದಶಕಗಳಿಂದ ಹೋರಾಟ ನಡೆಸಿ ಪಕ್ಷ ಕಟ್ಟಿರುವ ಯಡಿಯೂರಪ್ಪ ಬಿಜೆಪಿ ತೊರೆಯುವುದಿಲ್ಲ. ಅವರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವು ಬದ್ಧವಾಗಿರುತ್ತೇವೆ ಎಂದು ಒಗ್ಗರಣೆ ಹಾಕಿದರು.
ಯಡಿಯೂರಪ್ಪ ನಿವಾಸದಲ್ಲಿ ನಡೆದ ಆಪ್ತರ ಸಭೆಯಲ್ಲಿ ಸಚಿವರಾದ ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ಸಿಎಂ ಉದಾಸಿ, ಉಮೇಶ್ ಕತ್ತಿ, ಬಸವರಾಜ್ ಬೊಮ್ಮಾಯಿ, ಮೇಲ್ಮನೆ ಸದಸ್ಯ ಲೆಹರ್ ಸಿಂಗ್ ಮೊದಲಾದವರು ಭಾಗವಹಿಸಿದ್ದರು.












Click it and Unblock the Notifications