ಲಾರಿ ಮುಷ್ಕರ ಆದ್ರೆ ಗ್ಯಾಸ್ ಟ್ರಬಲ್ ಶುರು?

ಮಂಗಳೂರು ಬಂದರಿನಿಂದ ಅಡುಗೆ ಅನಿಲ ಸರಬರಾಜು ಮಾಡುವ ಸುಮಾರು 3600ಕ್ಕೂ ಹೆಚ್ಚು ಟ್ಯಾಂಕರ್ ಲಾರಿಗಳು ಸಾಗಣೆ ಸ್ಥಗಿತಗೊಳಿಸಲಿದೆ. ಅಲ್ಲದೆ ಶಿರಾಢಿ ಘಾಟ್ ನಲ್ಲಿ ಕಳೆದ ವಾರದಿಂದ ಪ್ರತಿನಿತ್ಯ 8-10 ಗಂಟೆ ಸಂಚಾರ ಸ್ಥಗಿತಗೊಳ್ಳುತ್ತಿರುವುದು ಆತಂಕ ಇನ್ನಷ್ಟು ಹೆಚ್ಚಿಸಿದೆ.
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಅಡುಗೆ ಅನಿಲ ಸರಬರಾಜು ವ್ಯತ್ಯಯವಾಗುವ ಲಕ್ಷಣಗಳು ಕಂಡು ಬಂದಿದೆ. ಕರ್ನಾಟಕಕ್ಕೆ ಸರಕು ಲಾರಿಗಳು ಪ್ರತಿದಿನ ಸುಮಾರು 10 ಸಾವಿರ ಟನ್ ಗ್ಯಾಸ್ ಸರಬರಾಜು ಮಾಡುತ್ತಿವೆ.
ಇಂಡಿಯನ್ ಗ್ಯಾಸ್ ಕಂಪನಿ ಮಾಲೂರಿನ ದೇವನಗುಂಡಿಯಲ್ಲಿ ತನ್ನ ಘಟಕ ಹೊಂದಿದ್ದರೆ, ಹಿಂದುಸ್ತಾನ್ ಪೆಟ್ರೋಲಿಯಂ ಮಹದೇವಪುರದಲ್ಲಿ ಮತ್ತು ಭಾರತ್ ಗ್ಯಾಸ್ ನೆಲಮಂಗಲದಲ್ಲಿ ಸಂಗ್ರಹಣಾ ಘಟಕ ಹೊಂದಿವೆ. ಅದರಲ್ಲಿ ಭಾರತ್ ಮತ್ತು ಎಚ್‌ಪಿ ಸಂಪೂರ್ಣವಾಗಿ ರಸ್ತೆಯನ್ನೇ ಅವಲಂಬಿಸಿಕೊಂಡಿದೆ.
ಐಓಸಿ ಮಾತ್ರ ಅಡುಗೆ ಅನಿಲ ಸರಬಾರಾಜಿಗೆ ರೈಲನ್ನು ಹೆಚ್ಚು ಅವಲಂಬಿಸಿಕೊಂಡಿದೆ. ಹೀಗಾಗಿ, ಲಾರಿ ಮುಷ್ಕರ ಎಚ್‌ಪಿ ಮತ್ತು ಭಾರತ್ ಗ್ಯಾಸ್ ಕಂಪನಿ ಗ್ರಾಹಕರನ್ನು ಹೆಚ್ಚು ಬಾಧಿಸಲಿವೆ.
ಮುಷ್ಕರ ಏಕೆ?: ಸಾರಿಗೆ ಸಂಸ್ಥೆ ಬಸ್ ಗಳ ಮುಷ್ಕರಕ್ಕೆ ಜನರು ಹೊಂದಿಕೊಳ್ಳುವ ಮೊದಲೇ ಮತ್ತೊಂದು ಮುಷ್ಕರಕ್ಕೆ ರಾಜ್ಯವನ್ನು ಜನತೆ ಎದುರಿಸಬೇಕಾಗುತ್ತದೆ. ಜನ ಸಾಮಾನ್ಯರ ಮೇಲೆ ಯುಪಿಎ ಸರ್ಕಾರ ಡೀಸೆಲ್ ಬಾಂಬ್ ಎಸೆದ ಪರಿಣಾಮ ಸಿಟ್ಟಿಗೆದ್ದಿರುವ ಲಾರಿ ಮತ್ತು ಟ್ರಕ್ ಸರಕು ಸಾಗಾಟಗಾರ ಸಂಘ ಮುಷ್ಕರಕ್ಕೆ ಕರೆ ನೀಡಿದೆ.
ಡೀಸೆಲ್ ದರ ಏರಿಕೆ ಖಂಡಿಸಿ ಸೆ.19ರಿಂದ ಸರಕು ಸಾಗಣೆ ವಾಹನಗಳ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಅಖಿಲ ಭಾರತ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಈ ಸಂಬಂಧ ಸೆ.18ರಂದು ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ. ಏಕಾಏಕಿ ಡೀಸೆಲ್ ದರ ಏರಿಕೆ ಮಾಡಿರುವ ಸರ್ಕಾರದ ಕ್ರಮ ಸರಿಯಲ್ಲ. ಡೀಸೆಲ್ ದರ ಏರಿಕೆಯಿಂದ ನಿತ್ಯ ಜೀವನದ ಬದುಕು ಅಸ್ತವ್ಯಸ್ತಗೊಳ್ಳಲಿದೆ. ಡಿಸೇಲ್ ಮೇಲೆ ರು. 21 ಹೆಚ್ಚುವರಿ ತೆರಿಗೆ ವಿಧಿಸಿರುವುದು ಏಕೆ ಎಂದು ಷಣ್ಮುಗಪ್ಪ ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ಡಿಸೇಲ್ ಮೇಲಿನ ತೆರಿಗೆ ಇಳಿಕೆ ಮಾಡುವಂತೆ ಒತ್ತಾಯಿಸಲಾಗುವುದು. ಡಿಸೇಲ್ ಮೇಲಿನ ತೆರಿಗೆ ಇಳಿಕೆ ಮಾಡದಿದ್ದರೆ ಅನಿವಾರ್ಯವಾಗಿ ಅನಿರ್ಧಿಷ್ಟಾವಧಿ ಮುಷ್ಕರ ಹೂಡಬೇಕಾಗುತ್ತದೆ ಷಣ್ಮುಖಪ್ಪ ತಿಳಿಸಿದ್ದಾರೆ.
ಜನ ಸಾಮಾನ್ಯರಿಗೆ ಹೊರೆ: ಈಗ ಅಡುಗೆ ಅನಿಲ ಸಿಲೆಂಡರ್ 399-407 ರು/ಸಿಲಿಂಡರ್ ನಂತೆ ಸಿಗುತ್ತಿದೆ. ಹೊಸ ಕೋಟಾದಡಿ ಸಿಗುವ 6ನೇ ಸಿಲೆಂಡರ್ ಮುಗಿದು 7ನೇ ಸಿಲೆಂಡರ್ ಬೇಕಾದರೆ ರು 746-750/ಸಿಲೆಂಡರ್ ನಂತೆ ವೆಚ್ಚ ಭರಿಸಬೇಕಾಗುತ್ತದೆ. ಇನ್ನು ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾದರೆ ದುಡಿದಿದ್ದೆಲ್ಲ ಅಂಗಡಿಯವನ ಹೊಟ್ಟೆಗೆ ಎಂಬ ಮಾತು ದಿಟವಾಗುತ್ತದೆ.












Click it and Unblock the Notifications