ಮತ್ತೆ ಅಡ್ವಾಣಿ ರಾಮ ಜಪ: ಮಂದಿರ ಕಟ್ಟಲೇಬೇಕು

ಈ ಸಂಬಂಧ ಘೋರಕಪುರದ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅಡ್ವಾಣಿ 'ಈ ದೇಶ ರಾಮ ರಾಜ್ಯವಾಗಬೇಕಾದರೆ ರಾಮ ಮಂದಿರ ನಿರ್ಮಾಣವಾಗಲೇಬೇಕು' ಎಂದೂ ಪ್ರತಿಪಾದಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಕಲ್‌ರಾಜ್ ಮಿಶ್ರಾ ಮತ್ತು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಅಶೋಕ್ ಸಿಂಘಲ್ ಹಾಜರಿದ್ದರು.
'ರಾಮಜನ್ಮ ಭೂಮಿ ಚಳವಳಿಯು ಹಿಂದೂಗಳ ಸ್ವಾಭಿಮಾನದ ಹೋರಾಟವಾಗಿದೆ, ಈ ದೇಶ ರಾಮ ರಾಜ್ಯ ಎಂದು ಕರೆಸಿಕೊಳ್ಳಬೇಕಾದರೆ ರಾಮಜನ್ಮ ಭೂಮಿಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು' ಎಂದಿದ್ದಾರೆ. 'ಮಹಾಂತ ಅವೈದ್ಯನಾಥ ಮತ್ತು ಅಶೋಕ್ ಸಿಂಘಲ್ ಅವರ ಜೀವಿತಾವಧಿಯಲ್ಲೇ ರಾಮಮಂದಿರ ನಿರ್ಮಾಣವಾಗಲಿದೆ' ಎಂದೂ ಅಡ್ವಾಣಿ ಆಶಿಸಿದ್ದಾರೆ.
'ಅಂದಿನ ರಾಜೀವ್ ಗಾಂಧಿ ನೇತೃತ್ವದ ಸರಕಾರವೇ ರಾಮ ಮಂದಿರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬೇಕಿತ್ತು ಎಂದು ಅಡ್ವಾಣಿ ಅಭಿಪ್ರಾಯಪಟ್ಟರು. ಬೃಹತ್ ರಾಮ ಮಂದಿರ ನಿರ್ಮಾಣವಾದ ದಿನ ಜನರಿಗೆ ಶಾಂತಿ ಸಮಾಧಾನ ದೊರಕಲಿದೆ. ರಾಮ ಭಕ್ತರು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಅದನ್ನು ಸಾಧಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಸದಾ ಕಾರ್ಯಪ್ರವೃತ್ತರಾಗೋಣ' ಎಂದು ಹೇಳಿದ್ದಾರೆ.
ಈ ಕುರಿತಾದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಸ್ತಾಪಿಸಿದ ಅಡ್ವಾಣಿ ಈಗಿರುವ ಮೂಲ ಸ್ಥಾನವೇ ರಾಮನ ಜನ್ಮಭೂಮಿ ಎಂಬುದನ್ನು ತೀರ್ಪು ನೀಡಿದ ಮೂರೂ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ಹಿಂದೂ ಮತ್ತು ಮುಸಲ್ಮಾನ ನಾಯಕರು ಒಂದೆಡೆ ಕುಳಿತು ವಿಷಯವನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಅವರು ಆಶಿಸಿದರು.












Click it and Unblock the Notifications