ಆಯಾ ವಾರ್ಡಲ್ಲೇ ಕಸ ವಿಲೇವಾರಿ ಘಟಕ ಸ್ಥಾಪಿಸಿ

ವಕೀಲ ಜಿ.ಆರ್. ಮೋಹನ್ ಎಂಬುವವರು ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರ ನೇತೃತ್ವದ ವಿಭಾಗೀಯ ಪೀಠ, ಈ ಕಸ ವಿಲೇವಾರಿ ಸುಗಮವಾಗಿ ನಡೆಯುವುದನ್ನು ನೋಡಿಕೊಳ್ಳಲು ಎಕ್ಸಿಕ್ಯೂಟಿವ್ ಮಂಡಳಿ ನಾಮನಿರ್ದೇಶನ ಮಾಡಬೇಕು ಮತ್ತು ಬಿಬಿಎಂಪಿ ಇನ್‌ಸ್ಪೆಕ್ಟರ್ ಅಥವಾ ಇಂಜಿನಿಯರುಗಳನ್ನು ನೇಮಕ ಮಾಡಬೇಕು ಎಂದು ಬಿಬಿಎಂಪಿಗೆ ಕಟ್ಟುನಿಟ್ಟಿನ ಆದೇಶಿಸಿದೆ.
ಇದರ ಜೊತೆಗೆ, ಕಸ ವಿಲೇವಾರಿ ಘಟಕ ಸ್ಥಾಪಿಸಲು ಖಾಸಗಿ ಕಂಪನಿಗಳು ಹೂಡಿರುವ ಅರ್ಜಿಗಳನ್ನು ಆದಷ್ಟು ಬೇಗನೆ ಪರಿಶೀಲಿಸಿ, ಘಟಕವನ್ನು ಸ್ಥಾಪಿಸಲು ಶೀಘ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಬಿಎಂಪಿಗೆ ಹೌಕೋರ್ಟ್ ಹೇಳಿದೆ. ಕಸವನ್ನು ವಿಲೇವಾರಿ ಮಾಡಲು ಘಟಕ ಸ್ಥಾಪಿಸಲು ಅನೇಕ ಖಾಸಗಿ ಕಂಪನಿಗಳು ಮುಂದೆ ಬಂದಿವೆ ಮತ್ತು ಈ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಅನೇಕ ಬುದ್ಧಿಜೀವಿಗಳು ಮುಂದೆ ಬಂದಿದ್ದಾರೆ.
ವಿಂಗಡನೆ ಮಾಡದಿದ್ದರೆ ದಂಡ : ಕಸ ವಿಲೇವಾರಿ ಕ್ರಮವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರು, ಕಸ ಮನೆಯ ಹೊಸ್ತಿಲು ದಾಟಿ ಬರುವ ಮುಂಚೆಯೇ ಬಿಬಿಎಂಪಿ ನಿಯಮಗಳಂತೆ ಸರಿಯಾಗಿ ವಿಂಗಡನೆಯಾಗಬೇಕು. ಸರಿಯಾಗಿ ವಿಂಗಡನೆ ಮಾಡದಿದ್ದರೆ ಪ್ರತಿ ಮನೆಯವರಿಗೆ 100 ರು. ದಂಡ ವಿಧಿಸಬೇಕು ಎಂದು ಹೇಳಿದ್ದಾರೆ.
ಆಗಸ್ಟ್ 27ರಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ್ದ ಹೈಕೋರ್ಟ್, ಸರಕಾರ ಮತ್ತು ಬಿಬಿಎಂಪಿಗೆ ನೋಟೀಸ್ ನೀಡಿತ್ತು ಮತ್ತು ನಗರದಲ್ಲಿ ಉದ್ಭವವಾಗಿರುವ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ವಿವರ ಸಲ್ಲಿಸಬೇಕು ಎಂದು ಆದೇಶಿಸಿತ್ತು.
ನಗರದ ಪ್ರದಕ್ಷಿಣೆ ಮಾಡಿದರೆ, ಹಲವಾರು ಪ್ರದೇಶಗಳಲ್ಲಿ ಕಸ ವಿಲೇವಾರಿಯಾಗದೆ ಸುತ್ತಲಿನ ಜನರಿಗೆ ತಲೆನೋವು ತಂದಿಟ್ಟಿದೆ. ಗುಡ್ಡೆ ಕೂತಿರುವ ಕಸ ನಾನಾ ರೋಗಗಳನ್ನು ಹಬ್ಬಿಸುತ್ತಿದೆ. ಕಸ ವಿಲೇವಾರಿಗೆ ಸ್ಥಾಪಿಸಲಾಗಿದ್ದ ಘಟಕಗಳು, ಅಲ್ಲಿನ ನಿವಾಸಿಗಳ ಆಕ್ಷೇಪಣೆಯಿಂದಾಗಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ.












Click it and Unblock the Notifications