ಇಸ್ರೋ 100ನೇ ಬಾಹ್ಯಾಕಾಶ ಯೋಜನೆ ಯಶಸ್ವಿ

ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.51ಕ್ಕೆ Polar Satellite Launch Vehicle(ಪಿಎಸ್‌ಎಲ್‌ವಿ)-ಸಿ21 ರಾಕೆಟ್ ಮೇಲಕ್ಕೆ ಹಾರಿ ಇಸ್ರೋದ ಇತಿಹಾಸದಲ್ಲಿ ಒಂದು ಧನ್ಯತೆಯ ಕ್ಷಣ ಮೂಡಿಸಿತು.
ಪ್ರಧಾನಿ ಮನಮೋಹನ್ ಸಿಂಗ್ ರೊಂದಿಗೆ ಈ ಮಹತ್ವದ ಕ್ಷಣವನ್ನು ವೀಕ್ಷಿಸುವುದಕ್ಕೆ ಕೇಂದ್ರ ಸಚಿವ ವಿ.ನಾರಾಯಣ ಸ್ವಾಮಿ ಕೂಡ ಸಾಕ್ಷಿಯಾದರು. ಈ ಸಂದರ್ಭ ಇಸ್ರೋ ಮುಖ್ಯಸ್ಥ ಡಾ.ಕೆ.ರಾಧಾಕೃಷ್ಣನ್, ಇಸ್ರೋ ಮಿಶನ್ ನಿರ್ದೇಶಕ ಕುನ್ಹಿ ಕೃಷ್ಣನ್, ಇಸ್ರೋದ ಮಾಜಿ ಮುಖ್ಯಸ್ಥ ಕೆ. ಕಸ್ತೂರಿ ರಂಗನ್ ಮತ್ತಿತರ ಪ್ರಮುಖ ವಿಜ್ಞಾನಿಗಳು ಉಪಸ್ಥಿತರಿದ್ದರು.
1975ರಲ್ಲಿ ಭಾರತದ ಮೊಟ್ಟ ಮೊದಲ ಉಪಗ್ರಹ ಆರ್ಯಭಟವನ್ನು ಬಾಹ್ಯಾಕಾಶ ಯಾನದಲ್ಲಿ ನೂರನೇ ಮೈಲಿಗಲ್ಲು ದಾಟಿಸಿದ ಕೀರ್ತಿ ಪಿಎಸ್‌ಎಲ್‌ವಿ-ಸಿ21ಗೆ ಸಲ್ಲುತ್ತದೆ. ಆರ್ಯಭಟವನ್ನು ರಷ್ಯಾದ ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಹಾರಿಸಲಾಗಿತ್ತು. ಆರಂಭದಲ್ಲಿ ಇಸ್ರೋ ಸಿದ್ಧಪಡಿಸಿದ ಎಲ್ಲ ಉಪಗ್ರಹಗಳನ್ನು ವಿದೇಶಿ ರಾಕೆಟ್‌ಗಳ ನೆರವಿನೊಂದಿಗೆ ಉಡಾಯಿಸಲಾಗಿತ್ತು.
1980ರಲ್ಲಿ ಮೊದಲ ಸ್ವದೇಶಿ ರಾಕೆಟ್ ಎಸ್‌ಎಲ್‌ವಿ-3ಯನ್ನು ಯಶಸ್ವಿಯಾಗಿ ಹಾರಿಸಲಾಯಿತು. ಅಂದಿನಿಂದ ಇಂದಿನವರೆಗೆ 85 ಉಡಾವಣೆಗಳು ನಡೆದಿವೆ. ಅವುಗಳ ಪೈಕಿ ಹೆಚ್ಚಿನವು ಯಶಸ್ವಿಯಾಗಿವೆ.
ಒಂದು ಬಾಹ್ಯಾಕಾಶ ಯೋಜನೆ ಎಂದರೆ ಒಂದೋ ಉಪಗ್ರಹ ಅಥವಾ ಉಡಾವಣಾ ವಾಹಕ. ಭಾರತೀಯ ಉಪಗ್ರಹವನ್ನು ಭಾರತೀಯ ಉಡಾವಣಾ ವಾಹಕದಲ್ಲಿ ಉಡಾಯಿಸಿದರೆ ಅದನ್ನು ಎರಡು ಯೋಜನೆಗಳೆಂಬುದಾಗಿ ಪರಿಗಣಿಸಲಾಗುತ್ತದೆ.
ಪಿಎಸ್‌ಎಲ್‌ವಿ-ಸಿ21 ವಾಹಕ 712 ಕೆಜಿ ತೂಕದ ಫ್ರಾನ್ಸ್‌ನ ಭೂ ವೀಕ್ಷಣೆ ಉಪಗ್ರಹ 'ಸ್ಪಾಟ್ 6' ಅನ್ನು ಉಡಾಯಿಸಿದೆ. ಈ ಯೋಜನೆ ಯಶಸ್ವಿಯೊಂದಿಗೆ, ಅತ್ಯಂತ ಹೆಚ್ಚು ಭಾರದ ವಿದೇಶಿ ಉಪಗ್ರಹ ಬಾಹ್ಯಾಕಾಶಕ್ಕೆ ಕಳುಹಿಸಿದ ಸಾಧನೆಯನ್ನು ಇಸ್ರೋ ಮಾಡಿದೆ.
ಇದರ ಜೊತೆಗೆ ರಾಕೆಟ್ ಜಪಾನ್‌ನ 15 ಕೆಜಿ ತೂಕದ ಪುಟ್ಟ ಉಪಗ್ರಹ 'ಪ್ರಾಯ್ಟರಸ್'ಅನ್ನೂ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.












Click it and Unblock the Notifications