ತಾಯಿ ಬೈಗುಳ ಸಹಿಸದೆ ವಿದ್ಯಾರ್ಥಿ ನೇಣಿಗೆ ಶರಣು

13 ವರ್ಷದ ಆಕಾಶ್ ಅವರ ತಂದೆ ಆಂಧ್ರದ ಹಳ್ಳಿಯೊಂದರಲ್ಲಿ ವ್ಯವಸಾಯ ಮಾಡಿಕೊಂಡಿದ್ದಾರೆ. ತಾಯಿ ಮಕ್ಕಳನ್ನು ಓದಿಸುವ ಸಲುವಾಗಿ ಬೆಂಗಳೂರಿಗೆ ಬಂದು ನೆಂಟರಿಷ್ಟರ ಸಹಾಯದಿಂದ ಜಯನಗರದ ಮಾರೇನಹಳ್ಳಿ ಸಮೀಪ ಮನೆ ಮಾಡಿದ್ದರು.
ಮಾರೇನಹಳ್ಳಿಯ ಎಂಟಿಬಿ ಲೇಔಟ್ ನ ಆರನೇಹಂತ 6ನೇ ಮುಖ್ಯರಸ್ತೆಯಲ್ಲಿ ಮನೆಯಲ್ಲಿ ತನ್ನ ಎರಡು ಮಕ್ಕಳೊಂದಿಗೆ ಜ್ಯೋತಿ ನಾಯ್ಡು ವಾಸವಾಗಿದ್ದರು. ಮೃತಪಟ್ಟ ಆಕಾಶ್ ಅವರ ಅಣ್ಣ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಇಬ್ಬರು ಪ್ರತಿದಿನ ಒಟ್ಟಿಗೆ ಸಮೀಪದ ಖಾಸಗಿ ಶಾಲೆಗೆ ಹೋಗುತ್ತಿದ್ದರು.
ಅದರೆ, ಶುಕ್ರವಾರ ಅಣ್ಣನೊಡನೆ ಶಾಲೆಗೆ ಹೋಗದೆ ಆಕಾಶ್ ಮನೆಯಲ್ಲೇ ಉಳಿದಿದ್ದಾನೆ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ತಾಯಿ ಜ್ಯೋತಿ ಕೂಡಾ ಆಕಾಶ್ ಬಗ್ಗೆ ಹೆಚ್ಚಿನ ಗಮನ ಹರಿಸದೆ ತಮ್ಮ ಕಚೇರಿಗೆ ತೆರಳಿದ್ದಾರೆ. ಅಣ್ಣನಿಗೆ ನಾನು ಶಾಲೆಗೆ ತಡವಾಗಿ ಬರುತ್ತೇನೆ. ಹೋಂ ವರ್ಕ್ ಸ್ವಲ್ಪ ಬಾಕಿ ಇದೆ ಎಂದು ಸುಳ್ಳು ಹೇಳಿ ಮನೆಯಲ್ಲೆ ಉಳಿದಿದ್ದಾನೆ.
ಮನೆಯಲ್ಲಿ ಯಾರೂ ಇಲ್ಲದ ಸಮಯಕ್ಕೆ ಕಾಯುತ್ತಿದ್ದ ಆಕಾಶ್ ಹಿಂದಿನ ದಿನ ರಾತ್ರಿ ತನ್ನ ಅಮ್ಮ ಬೈದ್ದಿದ್ದು ನೆನಪಿಗೆ ಬಂದಿದೆ. ಆಕಾಶ್ ಗೆಳೆಯರೊಡನೆ ಅಡ್ಡಾಡಿಕೊಂಡು ತಡವಾಗಿ ಮನೆಗೆ ವಾಪಾಸ್ ಆಗಿದ್ದ. ತಾಯಿ ತನ್ನ ಗೋಳು ತೋಡಿಕೊಂಡು ಓದಿನ ಬಗ್ಗೆ ಗಮನ ಹರಿಸುವಂತೆ ಗದರಿಸಿದ್ದರು. ವಿದ್ಯೆಗಾಗಿ ಊರು ಬಿಟ್ಟು ಊರಿಗೆ ಬಂದರೆ ನೀನು ಈ ರೀತಿ ಮಾಡುತ್ತಿದ್ದೀಯಾ ನಮ್ಮ ಮರ್ಯಾದೆ ಕಳೆಯಬೇಡ ಎಂದು ತಾಯಿ ಸಹಜವಾಗಿ ಕೋಪಿಸಿಕೊಂಡು ಹೇಳಿದ್ದರು.
ಆದರೆ, ಆಕಾಶ್ ಗೆ ತಾಯಿಯ ಬೈಗುಳ ಸಹಿಸಲು ಕಷ್ಟವಾಗಿದೆ ರೂಮ್ ಗೆ ಹೋಗಿ ಕುರ್ಚಿ ಹಾಕಿಕೊಂಡು ಮನೆಯ ತೊಲೆಗೆ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗ್ಗೆ ಸಮಯದಲ್ಲಿ ಮನೆಯ ಬಾಗಿಲು ತೆಗೆದಿರುವುದನ್ನು ಕಂಡ ಸ್ಥಳೀಯರೊಬ್ಬರು ಒಳಬಂದು ನೋಡಿದಾಗ ಆಕಾಶ್ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೆರೆ ಹೊರೆಯವರು, ಆತನ ಗೆಳೆಯರು, ಸಂಬಂಧಿಕರು ಎಲ್ಲರೂ ಮನೆ ಕಡೆಗೆ ಧಾವಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಶವವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಮಕ್ಕಳ ಭವಿಷ್ಯಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದ್ದ ತಾಯಿಗೆ ಮಗನ ಸಾವಿನ ಸುದ್ದಿ ಆಘಾತ ತಂದಿದೆ. ಆಕಾಶವೇ ಕಳಚಿ ಬಿದ್ದಂತೆ ರೋದಿಸುತ್ತಿದ್ದಾರೆ.












Click it and Unblock the Notifications