ವಿಲಾಸರಾವ್ ಗೆ ತಕ್ಷಣ ಲಿವರ್ ಕಳಿಸಿ ಕೊಡಿ: ಮೋದಿ

ಹೌದು, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ವಿಲಾಸರಾವ್ ದೇಶ್ ಮುಖ್ ಅವರ ಆರೋಗ್ಯ ನಿಜಕ್ಕೂ ಕಳವಳಕಾರಿಯಾಗಿದೆ. ಅವರ ಪುತ್ರ, ನವ ವಿವಾಹಿತ (ನಟಿ ಜೆನಿಲಿಯಾ ಪತಿ) ರಿತೇಶ್ ದೇಶ್ ಮುಖ್ ಖುದ್ದು ನನ್ನ ಲಿವರ್ ಅನ್ನೇ ನಮ್ಮಪ್ಪನಿಗೆ ಜೋಡಿಸಿ ಎಂದು ವೈದ್ಯರ ಮುಂದೆ ಕೈಜೋಡಿಸಿದ್ದರು. ಆದರೆ ವೈದ್ಯರು ಯಾಕೋ ಬೇಡವೆಂದರು.
ಅದಾದ ಬಳಿಕ, ವಿಲಾಸ ರಾವ್ ಅವರ ಆರೋಗ್ಯ ಸುಧಾರಿಸದೇ ಮತ್ತಷ್ಟು ಬಿಗಡಾಯಿಸಿದೆ. ಈ ಮಧ್ಯೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ತಮ್ಮ ರಾಜಧಾನಿಯಲ್ಲಿರುವ ಅತ್ಯುತ್ತಮ ವೈದ್ಯ ತಂಡವನ್ನು ತಕ್ಷಣ ವಿಲಾಸ ರಾವ್ ಆರೈಕೆಗೆ ಅಟ್ಟಿದರು. ಚೆನ್ನೈ ವೈದ್ಯರ ಕೈಗುಣ ವಿಲಾಸ ರಾವ್ ಸ್ವಲ್ಪ ಸುಧಾರಿಸಿಕೋಂಡಿದ್ದರು.
ಇಂತಹ ಸಂದರ್ಭದಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ' ಹಾಸಿಗೆ ಹಿಡಿದಿರುವ ಮಾಜಿ ಸಿಎಂ ವಿಲಾಸರಾವ್ ದೇಶ್ ಮುಖ್ ಅವರಿಗಾಗಿ ಮೃತ ವ್ಯಕ್ತಿಯ ಒಂದು ಯಕೃತ್ತನ್ನು (cadaver liver) ತಕ್ಷಣ ಅರೇಂಜ್ ಮಾಡಿ. ಇದು ನಿಮ್ಮ ಆದ್ಯ ಕರ್ತವ್ಯವಾಗಲಿ' ಎಂದು ತಮ್ಮ ಟ್ವಿಟ್ಟರ್ ಮೂಲಕ ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಅದಕ್ಕೂ ಮುನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ರಾಜೀವ್ ಶುಕ್ಲಾ ಅವರು 'ನನ್ನ ಗೆಳೆಯ ವಿಲಾಸರಾವ್ ದೇಶ್ ಮುಖ್ ಆಸ್ಪತ್ರೆ ಸೇರಿದ್ದು, ಆತನಿಗೆ ತಕ್ಷಣ ಒಂದು ಲಿವರ್ ಜೋಡಣೆಯಾಗಬೇಕಿದೆ. ಅದು ಮೃತ ವ್ಯಕ್ತಿಯ ಯಕೃತ್ತೇ ಆಗಿರಬೇಕು ಎಂದು ವೈದ್ಯರು ಹೇಳಿದ್ದಾರೆ. ತುಂಬಾ ವ್ಯಾಕುಲಗೊಂಡಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.
'ನಿಮಗೆ ಯಾರಾದರೂ ಗೊತ್ತಿದ್ದರೆ ತಕ್ಷಣ ಈ ನಿಟ್ಟಿನಲ್ಲಿ ನೆರವಾಗಲು ಸೂಚಿಸಿ. ಚೆನ್ನೈನ ಗ್ಲೋಬಲ್ ಆಸ್ಪತ್ರೆಯಲ್ಲಿರುವ ನನ್ನ ಗೆಳೆಯನನ್ನು ನೋಡಲು ನಾನು ಹೊರಟಿದ್ದೇನೆ' ಎಂದು ಶುಕ್ಲಾ ಅವರು ಟ್ವೀಟ್ ಮಾಡಿದ್ದಾರೆ.
67 ವರ್ಷದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ (ಲಾತೂರಿನ) ವಿಲಾಸರಾವ್ ದೇಶ್ ಮುಖ್ ಅವರನ್ನು ಲಿವರ್ ಕ್ಯಾನ್ಸರ್ ಕಾಡುತ್ತಿದೆ. ಇದರಿಂದ ಬಹುಅಂಗ ವೈಫಲ್ಯವೂ ಕಾಣಿಸಿಕೊಂಡಿದೆ.












Click it and Unblock the Notifications