ಯುವನೀತಿ: ಸ್ವಾಮಿ ವಿವೇಕಾನಂದ ನಿಗಮ ಅಸ್ತಿತ್ವಕ್ಕೆ

ಬೆಂಗಳೂರು, ಆ.10: ಕರ್ನಾಟಕದಲ್ಲಿ 1.86 ಕೋಟಿ ಯುವಕರಿದ್ದಾರೆ. ಆ ಯುವ ಸಂಪತ್ತಿನ ಸದ್ಬಳಕೆಯಾಗಬೇಕಿದೆ. ಹಾಗಾಗಿ, ಯುವಜನತೆಯ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ವಾಮಿ ವಿವೇಕಾನಾಂದ ಅವರ ಹೆಸರಿನಲ್ಲಿ ಪ್ರತ್ಯೇಕ ಯುವ ನಿಗಮವೊಂದನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್ ತಿಳಿಸಿದ್ದಾರೆ.

swami-vivekananda-corporation-to-be-setup-karnataka

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜ್ಞಾನ ಆಯೋಗದ ಸಹಯೋಗದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಸಿದ್ಧಪಡಿಸಿರುವ 'ರಾಜ್ಯ ಯುವ ನೀತಿ-2012 ಕರಡು' ಅನ್ನು ವಿಧಾನಸೌಧದಲ್ಲಿ ಗುರುವಾರ ಬಿಡುಗಡೆಗೊಳಿಸುವ ವೇಳೆ ಅವರು ಈ ವಿಷಯ ಪ್ರಕಟಿಸಿದರು.

ಭಾರತ ದೇಶವು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಯುವಸಮೂಹ ಹೊಂದಿರುವ ದೇಶವಾಗಿದೆ. ಕರ್ನಾಟಕದಲ್ಲಿಯೂ 16 ರಿಂದ 30 ವರ್ಷದೊಳಗಿನ ಯುವಕರ ಸಂಖ್ಯೆ 1.86 ಕೋಟಿ ಇದೆ. ಯುವಸಮೂಹ ಒಂದು ಸಂಪತ್ತು. ಯುವಜನತೆಯನ್ನು ರಚನಾತ್ಮಕ ಕೆಲಸ ಕಾರ್ಯಗಳಲ್ಲಿ ತೊಡಗಿಸುವ ಅಗತ್ಯವಿದೆ ಎಂದು ಜಗದೀಶ್‌ ಶೆಟ್ಟರ್ ತಿಳಿಸಿದರು.

ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ವಿವಿಧ ಇಲಾಖೆಗಳ ಮೂಲಕ ಯುವಸಮೂಹಕ್ಕೆ ಅನುಕೂಲ ಕಲ್ಪಿಸಲು 4,534 ಕೋಟಿ ರೂ. ಮೊತ್ತ ತೆಗೆದಿರಿಸಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ಯುವನೀತಿ ಕರಡು ರಚಿಸಲಾಗಿದೆ. ಸಾರ್ವಜನಿಕರ ಮತ್ತು ಯುವಕರ ಅಭಿಪ್ರಾಯ ಪಡೆದ ನಂತರ ಯುವ ನೀತಿ ಜಾರಿಗೊಳಿಸಲಾಗುವುದು ಎಂದು ಶೆಟ್ಟರ್ ಹೇಳಿದರು.

ಯುವಜನ ಸೇವೆ ಹಾಗೂ ಕ್ರೀಡಾ ಸಚಿವ ಅಪ್ಪಚ್ಚುರಂಜನ್‌ ಮಾತನಾಡಿ, ಯುವಸಮೂಹದಲ್ಲಿ ಇಂದು ರಾಷ್ಟ್ರಭಕ್ತಿ, ರಾಷ್ಟ್ರೀಯ ಭಾವನೆ ಮೂಡಿಸಿ ಸ್ವಾವಲಂಬಿಗಳನ್ನಾಗಿ ಮಾಡಬೇಕಿದೆ. ಅದಕ್ಕಾಗಿ ರಾಜ್ಯ ಸರ್ಕಾರವು ಯುವನೀತಿ ರಚಿಸಿದೆ. ಬಜೆಟ್‌ನಲ್ಲಿ ಇದಕ್ಕಾಗಿ 25 ಕೋಟಿ ರೂ. ಮೀಸಲಿಡಲಾಗಿದೆ ಎಂದು ತಿಳಿಸಿದರು.

'ಪ್ರತಿ ಜಿಲ್ಲೆಯಲ್ಲೂ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್‌ ಅಧ್ಯಕ್ಷರು, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಸ್ಥಳೀಯ ಯುವಕ ಸಂಘಗಳ ಸಲಹೆ ಸೂಚನೆ, ಶಿಕ್ಷಣ ತಜ್ಞರು, ಸೇವಾ ಸಂಸ್ಥೆಗಳು, ಸಾಧಕರು, ಶಾಲಾ-ಕಾಲೇಜು ಪ್ರಾಂಶುಪಾಲರು, ವಿಶ್ವವಿದ್ಯಾಲಯ ಕುಲಪತಿಗಳು ಸೇರಿದಂತೆ ಎಲ್ಲರ ಸಲಹೆ ಸೂಚನೆ ಪಡೆದು ಯುವನೀತಿ ಕರಡು ಸಿದ್ಧಪಡಿಸಲಾಗಿದೆ.'

'ಮತ್ತಷ್ಟು ಸಲಹೆ-ಸೂಚನೆಗಳಿಗೂ ಅವಕಾಶವಿದ್ದು ಆ ನಂತರ ಸ್ಪಷ್ಟ ನೀತಿ ಸಿದ್ಧಗೊಳ್ಳಲಿದೆ' ಎಂದು ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಗಿರೀಶ್‌ ಪಾಟೀಲ್‌ ಹೇಳಿದರು.

ಯುವ ನೀತಿಯ ಕರಡು ರಚನಾ ಸಮಿತಿ ಅಧ್ಯಕ್ಷ ಡಾ.ಸಂದೀಪ್ ಶಾಸ್ತ್ರಿ ಅವರು ಕರಡು ನೀತಿ ಕುರಿತು ವಿವರಣೆ ನೀಡಿದರು. ಉಪ ಮುಖ್ಯಮಂತ್ರಿ ಕೆ.ಎಸ್‌. ಈಶ್ವರಪ್ಪ, ಜ್ಞಾನ ಆಯೋಗದ ಪ್ರೊ. ಎಂ.ಕೆ. ಶ್ರೀಧರ್‌, ನಿವೃತ್ತ ಐಎಎಸ್‌ ಅಧಿಕಾರಿ ಡಾ.ಎ. ರವೀಂದ್ರ, ಯುವ ಜನ ಸೇವಾ ಇಲಾಖೆ ಕಾರ್ಯದರ್ಶಿ ಬಿ.ಬಸವರಾಜ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಎಂ.ಕೆ. ಬಲದೇವ ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

ಯುವ ನೀತಿಯ ನವ ರತ್ನಗಳು
* ನಂಬಿಕೆ, ಸಾಧನೆ, ಶಾಂತಿ, ಅಭಿವೃದ್ಧಿ ಮತ್ತು ಬದಲಾವಣೆಯ ಸಾಧನವೇ ಯುವಜನತೆ.
* ಸರ್ಕಾರ ಮತ್ತು ಕಾರ್ಪೊರೇಟ್ ಕ್ಷೇತ್ರದಲ್ಲಿನ ಸಾಮಾಜಿಕ ಜವಾಬ್ದಾರಿ.
* ಕೌಟುಂಬಿಕ ಮತ್ತು ಸಾಮಾಜಿಕ ಬಾಂಧವ್ಯವನ್ನು ಬಲಗೊಳಿಸುವಿಕೆ.
* ಯುವಕರ ಕೌಶಲ, ಸಾಮರ್ಥ್ಯ ಮತ್ತು ಮೇಧಾಶಕ್ತಿಯ ರಕ್ಷಣೆ.
* ಅತ್ಯುತ್ತಮ, ಸುಸಂಘಟಿತ ಪ್ರಯತ್ನದ ಭರವಸೆ.
* ಕ್ರೀಡೆ ಮತ್ತು ಮನರಂಜನೆಯ ಅವಕಾಶಗಳು.
* ಸಾಮಾಜಿಕ ನ್ಯಾಯ ಸಾಧನೆಗೆ ಉತ್ತೇಜನ.
* ಭಾಗವಹಿಸುವಿಕೆಗಾಗಿ ಪಾಲುದಾರಿಕೆ.
* ಗೌರವ ವೃದ್ಧಿ.

ಯುವನೀತಿಯಲ್ಲಿ ಏನಿದೆ?
* ಸಮುದಾಯ ಸಹಕಾರ.
* ನೀತಿಯಲ್ಲಿ 5 ಹಂತದ ಕಾರ್ಯತಂತ್ರ.
* ಯುವಜನರ ನಿರೀಕ್ಷೆ- ಶಿಕ್ಷಣ, ಉದ್ಯೋಗ, ಕ್ರೀಡೆ ಮತ್ತು ಬದಲಾವಣೆಯ ಬಯಕೆ.
* ತಲುಪುವುದು, ತೊಡಗಿಸುವುದು, ಸಬಲೀಕರಿಸುವುದು, ಕೊಡುಗೆ ಮತ್ತು ಅಭಿವೃದ್ಧಿ.
* ಭಾರತೀಯ ಸಂಸ್ಕೃತಿ, ದೇಶ, ನಂಬಿಕೆಗಳ ಬಗ್ಗೆ ಗೌರವ ಮತ್ತು ಹೆಮ್ಮೆ ಮೂಡಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+