ಪರಪುರುಷನ ಜೊತೆ ಪತ್ನಿ, ಪಾತಕಿಯಾದ ಪತಿ

ಅನೈತಿಕ ಸಂಬಂಧದ ಆರೋಪದ ಹೊತ್ತು ಹತ್ಯೆಯಾದ ಮಹಿಳೆಯನ್ನು ಶಿವಲಿಂಗಮ್ಮ (38) ಎಂದು ಗುರುತಿಸಲಾಗಿದೆ. ಆಕೆಯನ್ನು ಕೊಂದ ಪತಿ ಶ್ರೀನಿವಾಸ ಮೂರ್ತಿ ಪೊಲೀಸರ ವಶದಲ್ಲಿದ್ದಾನೆ.
ಸುಮಾರು 20 ವರ್ಷಗಳ ಹಿಂದೆ ಕೊರಟಗೆರೆ ತಾಲೂಕಿನ ದೊಗ್ಗನಹಳ್ಳಿಯ ಶ್ರೀನಿವಾಸ ಮೂರ್ತಿ ಹಾಗೂ ಶಿವಲಿಂಗಮ್ಮ ವಿವಾಹವಾಗಿತ್ತು. ಆರಂಭದಲ್ಲಿ ಚೆನ್ನಾಗಿದ್ದ ದಂಪತಿ ಐದು ವರ್ಷಗಳ ಬಳಿಕ ಹಾವು ಮುಂಗುಸಿ ರೀತಿಯಲ್ಲಿ ಕಿತ್ತಾಡತೊಡಗಿದರು. ಇಬ್ಬರ ನಡುವೆ ಮನಸ್ತಾಪ ಪರಿಹರಿಸಲು ಬಂಧು ಮಿತ್ರರು ಸಾಕಷ್ಟು ಶ್ರಮಿ ಕೈ ಚೆಲ್ಲಿದ್ದರು.
ದಿನೇ ದಿನೇ ಸತಿ-ಪತಿ ನಡುವೆ ಜಗಳ ಮಾಮೂಲಿಯಾಗಿತ್ತು. ಎರಡು ಕುಟುಂಬಗಳ ಕಡೆಯವರೂ ಪಂಚಾಯತಿ ಕರೆದು ಜಗಳ ಬಿಡಿಸುವುದು, ರಾಜಿ ಮಾಡಿಸುವುದು ಹಲವು ಬಾರಿ ನಡೆದಿತ್ತು.
ತೀರಾ ಸಂಬಂಧ ಹಳಸಿದ ಪರಿಣಾಮ ಶಿವಲಿಂಗಮ್ಮಳಿಗೆ ದೊಗ್ಗನಹಳ್ಳಿಯ ಇನ್ನೊಬ್ಬ ವ್ಯಕ್ತಿಯ ಮೇಲೆ ಕಣ್ಣು ಬೀಳುತ್ತದೆ. ಮಂಗಳವಾರ ಮುಂಜಾನೆ ಜಲಬಾಧೆ ತೀರಿಸಿಕೊಳ್ಳಲು ಗ್ರಾಮದ ಪಕ್ಕದಲ್ಲಿರುವ ಜಮೀನಿಗೆ ಶ್ರೀನಿವಾಸ ಮೂರ್ತಿ ಬರುತ್ತಾನೆ. ಆಲ್ಲಿ ಕಿಲ ಕಿಲ ನಗುವಿನ ಸದ್ದು ಕೇಳಿ ಹತ್ತಿರದ ಪೊದೆಯ ಬಳಿಗೆ ಹೋಗಿ ನೋಡಿದ್ದಾನೆ. ಅಲ್ಲಿ ತನ್ನ ಪತ್ನಿ ಶಿವಲಿಂಗಮ್ಮ ಬೇರೊಬ್ಬ ವ್ಯಕ್ತಿಯ ಜೊತೆ ಲಲ್ಲೆಗೆರೆಯುತ್ತಿರುವುದನ್ನು ನೋಡಿ ಹೌಹಾರಿದ್ದಾನೆ.
ಕೂಡಲೇ ಜಮೀನ ಬಳಿ ಇದ್ದ ಮೆಷಿನ್ ರೂಮ್ ಗೆ ಹೋದ ಶ್ರೀನಿವಾಸಮೂರ್ತಿ ಮಚ್ಚನ್ನು ತೆಗೆದುಕೊಂಡು ಹೋಗಿ ಪತ್ನಿಯ ತಲೆ ಮತ್ತು ಕುತ್ತಿಗೆಗೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಶ್ರೀನಿವಾಸ ಮೂರ್ತಿ ಬರುತ್ತಿರುವುದನ್ನು ಕಂಡ ಶಿವಲಿಂಗಮ್ಮಳ ಪ್ರಿಯಕರ ಪರಾರಿಯಾಗಿದ್ದಾನೆ ಎಂದು ಕೊರಟಗೆರೆ ಪೊಲೀಸರು ಹೇಳಿದ್ದಾರೆ.
ತೀವ್ರ ಹಲ್ಲೆಗೊಳಗಾದ ಶಿವಲಿಂಗಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗ್ರಾಮಸ್ಥರು ಈ ವಿಷಯವನ್ನು ಕೊರಟಗೆರೆ ಪೊಲೀಸರಿಗೆ ತಿಳಿಸಿದ್ದಾರೆ. ಕೊಲೆಯಾದ ಮಹಿಳೆಯ ಮೃತ ದೇಹವನ್ನು ಪರಿಶೀಲಿಸಿ ಆರೋಪಿ ಶ್ರೀನಿವಾಸಮೂರ್ತಿಯನ್ನು ಬಂಧಿಸಿ ಮುಂದಿನ ಕ್ರಮ ಜರುಗಿಸಿದ್ದಾರೆ. ಮೃತ ಮಹಿಳೆ ಶಿವಲಿಂಗಮ್ಮ ಹಾಗೂ ಶ್ರೀನಿವಾಸ ಮೂರ್ತಿ ದಂಪತಿಗೆ ಒಬ್ಬ ಗಂಡು ಹಾಗೂ ಒಬ್ಬ ಹೆಣ್ಣು ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications