ಶಿರಡಿ ಹುಂಡಿಗೆ ಬೆಂಗಳೂರು ಭಕ್ತನ ಭರ್ಜರಿ ದಾನ

ಬೆಂಗಳೂರಿನ ಭಕ್ತರೊಬ್ಬರು ಸುಮಾರು 7.82 ಲಕ್ಷ ರು ಮೌಲ್ಯದ 320 ಗ್ರಾಂ ಚಿನ್ನವುಳ್ಳ ಕಿರೀಟವನ್ನು ನೀಡಿದ್ದಾರೆ. ಆದರೆ, ಅವರ ಹೆಸರು ಬಹಿರಂಗ ಪಡಿಸಲು ಇಚ್ಛಿಸಿದ್ದಾರೆ ಎಂದು ಸಾಯಿಬಾಬಾ ಟ್ರಸ್ಟ್ ಹೇಳಿದೆ.
ಬೆಲೆ ಬಾಳುವ ಹರಳು, ಮುತ್ತು ಖಚಿತ ಕಿರೀಟವನ್ನು ಬೆಂಗಳೂರು ಮೂಲದ ಶಿಕ್ಷಣತಜ್ಞರೊಬ್ಬರು ದಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಶ್ರಾವಣ ಮಾಸದ ಸೋಮವಾರ ದಿನದಂದು ಸಾಯಿಬಾಬಾಗೆ ಕಿರೀಟ ತೊಡಸಿದರೆ ಸರ್ವ ಸಂಕಷ್ಟಗಳು ದೂರಾಗಲಿದೆ ಎಂದು ದಾನಿಗಳಿಗೆ ಅವರ ಜ್ಯೋತಿಷಿಗಳು ಹೇಳಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಆಗಸ್ಟ್ ಮೊದಲ ವಾರದಲ್ಲಿ ಅನಾಮಿಕ ಭಕ್ತರೊಬ್ಬರು ಸುಮಾರು 1.18 ಕೋಟಿ ರು ಮೌಲ್ಯದ ಚಿನ್ನದ ಪೆಂಡೆಂಟ್ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಶಿರಡಿ ದೇಗುಲದ ಆದಾಯ ವಾರ್ಷಿಕವಾಗಿ ಶೇ.20ರಷ್ಟು ಏರಿಕೆಯಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಬ್ಬ ಹರಿದಿನ, ಗುರುವಾರಗಳಂದು ದೇಗುಲದ ಆದಾಯ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಕಳೆದ ಫ್ರೆಬವರಿ ಹೊತ್ತಿಗೆ ಸುಮಾರು 36 ಕೆಜಿ ಚಿನ್ನ ದೇಣಿಗೆ ಪಡೆದಿದ್ದ ಶಿರಡಿ ದೇಗುಲದ ಈ ತ್ರೈಮಾಸಿಕದ ವರದಿಯನ್ನು ಇನ್ನೂ ಶಿರಡಿ ಸಾಯಿ ದೇಗುಲ ಟ್ರಸ್ಟ್ ಬಿಡುಗಡೆ ಮಾದಿಲ್ಲ.
ಭಕ್ತಾದಿಗಳು ಹುಂಡಿಗೆ ಹಾಕಿರುವ ಮೊತ್ತದಲ್ಲಿ 36 ಕೆಜಿ ಚಿನ್ನ, 401 ಕೋಟಿ ರು ನಗದು ಲಭಿಸಿದೆ. 2010ರಲ್ಲಿ 31 ಕೆಜಿ ಚಿನ್ನವನ್ನು ಭಕ್ತಾದಿಗಳು ದೇವರಿಗೆ ಅರ್ಪಿಸಿದ್ದರು.
2010ರಲ್ಲಿ 320 ಕೆಜಿ ಬೆಳ್ಳಿ ಅರ್ಪಿಸಿದ್ದ ಭಕ್ತರು ಈ ವರ್ಷ 440 ಕೆಜಿ ಬೆಳ್ಳಿ ಹುಂಡಿಗೆ ಹಾಕಿದ್ದಾರೆ. ವಿದೇಶಿ ಹಣಗಳ ಮೊತ್ತದಲ್ಲೂ ಏರಿಕೆ ಕಂಡಿದ್ದು, 2010ರಲ್ಲಿ 5.43 ಕೋಟಿ ರು ಬಂದಿತ್ತು, ಈ ಬಾರಿ 6.28 ಕೋಟಿ ರು ಸಿಕ್ಕಿದೆ ಎಂದು ಟ್ರಸ್ಟಿ ಎಂ ಕಿಶೋರ್ ವಿವರಿಸಿದ್ದಾರೆ.












Click it and Unblock the Notifications