BMTC ಮಾರ್ಗ ಬದಲು: ನೆಟ್ಟಕಲ್ಲಪ್ಪ ವೃತ್ತದಲ್ಲಿ ಪ್ರತಿಭಟನೆ

ಐದು ದಶಕಗಳಿಂದ ಜಯನಗರ, ಜೆ.ಪಿ.ನಗರ, ಮತ್ತು ಆ ಭಾಗದ ಇತರೆ ಪ್ರದೇಶಗಳಿಗೆ ಹೋಗುವಂತಹ ಎಲ್ಲಾ ಬಸ್ಸುಗಳು ನಾಗಸಂದ್ರ ಮತ್ತು ನೆಟ್ಟಕಲ್ಲಪ್ಪ ವೃತ್ತದಲ್ಲಿ ಹಾದು ಹೋಗುತ್ತಿದ್ದವು. ಇದರಿಂದ ನಾಗಸಂದ್ರ, ಟಾಟಾ ಸಿಲ್ಕ್ ಫಾರಂ, ಶಾಸ್ತ್ರಿ ನಗರ, ಬೈರಪ್ಪ ಬ್ಲಾಕ್, ಶ್ರೀರಾಮ ಮಂದಿರ ರಸ್ತೆ, ಮಾಡೆಲ್ ಹೌಸ್ ಸ್ಟ್ರೀಟ್, ತ್ಯಾಗರಾಜ ನಗರ, ಎನ್.ಆರ್. ಕಾಲೋನಿ ಇತ್ಯಾದಿ ಭಾಗಗಳಿಗೆ ತುಂಬಾನೇ ಅನುಕೂಲವಾಗಿತ್ತು.
ಆರು ತಿಂಗಳಿಂದ ಈ ಕಾಟ: ಆದರೆ ಸುಮಾರು ಆರು ತಿಂಗಳಿಂದ ಈ ಮಾರ್ಗವನ್ನು ಬದಲಾಯಿಸಲಾಗಿದೆ. ಈಗ ಆ ಪ್ರದೇಶದ ಜನರು ಜಯನಗರ, ಜೆ.ಪಿ.ನಗರ ಸುತ್ತಮುತ್ತ ಪ್ರದೇಶಗಳಿಗೆ BMTC ಬಸ್ಸಿನಲ್ಲಿ ಸಂಚರಿಸಬೇಕೆಂದರೆ ಸುಮಾರು ಒಂದು ಕಿ.ಮೀ. ಅಂದರೆ ಹಳೆಯ ಶಾಂತಿ ಟಾಕೀಸ್ ಬಸ್ಸ್ ನಿಲ್ದಾಣದವರೆಗೂ ಹೋಗಬೇಕು. ವೃದ್ಧರು, ಅಂಗವಿಕಲರು, ಮಹಿಳೆಯರು, ವಿದ್ಯಾರ್ಥಿಗಳು, ಕಚೇರಿಗೆ ಹೋಗುವವರಿಗೆ ಇದರಿಂದ ತುಂಬಾ ತೊಂದರೆಯಾಗಿದೆ.
ಮಾರ್ಗ ಬದಲಾವಣೆ ಮಾಡಿ, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಕ್ಕೆ ಬಂದಿರಲಿಲ್ಲ. ಹಾಗಾಗಿ, ಈ ಅನಪೇಕ್ಷಿತ ಬದಲಾವಣೆಯನ್ನು ವಿರೋಧಿಸಿ ಕೆ.ವಿ. ಆದಿಶೇಷಯ್ಯ, ಮಾಜಿ ಮಹಾನಗರ ಪಾಲಿಕೆ ಸದಸ್ಯರು, ನೆಟ್ಟಕಲ್ಲಪ್ಪ ಸುತ್ತಮುತ್ತಲ ಪ್ರದೇಶದ ಎಲ್ಲಾ ಸಂಘಸಂಸ್ಥೆಗಳ ಸಹಕಾರದೊಂದಿಗೆ ಇಂದು (ಆಗಸ್ಟ್ 6) ನೆಟ್ಟಕಲ್ಲಪ್ಪ ವೃತ್ತದ ಬಳಿ ಭಾರಿ ಪ್ರತಿಭಟನೆ ನಡೆಸಲಾಯಿತು.
ಕೆಲ ಸಮಯದ ನಂತರ ಪ್ರತಿಭಟನ ಸ್ಥಳಕ್ಕೆ ಆಗಮಿಸಿದ ಬಿಎಂಟಿಸಿ ಮತ್ತು ಸಂಚಾರಿ ಪೊಲೀಸ್ ಅಧಿಕಾರಿಗಳು ಕೆಲವು ದಿನಗಳಲ್ಲಿ ಮಾರ್ಗ ಬದಲಾವಣೆ ಮಾಡಿ, ಯಥಾಸ್ಥಿತಿ ಕಾಯ್ದುಕೊಳ್ಳುವುದಾಗಿ ಆಶ್ವಾಸನೆ ನೀಡಿದರು. ನಂತರ ಪ್ರತಿಭಟನಕಾರರು ಪ್ರತಿಭಟನೆಯನ್ನು ಅಂತ್ಯಗೊಳಿಸಿದರು.












Click it and Unblock the Notifications