ಹೋಂ ಸ್ಟೇ ದಾಳಿ: ಸರ್ಕಾರ, ಸಿಬಿಐಗೆ ಕೋರ್ಟ್ ನೋಟಿಸ್

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ಕೃತ್ಯವನ್ನು ಖಂಡಿಸಿ ವಕೀಲ ವಾಸುದೇವ್ ಅವರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಕ್ರಮ್ ಜಿತ್ ಸೇನ್ ಅವರು, 'ಈ ದಾಳಿಯಿಂದ ನಾವೆಲ್ಲರೂ ತಲೆತಗ್ಗಿಸುವಂತಾಗಿದೆ. ಘಟನೆ ವೇಳೆ ಅಲ್ಲಿದ್ದ ಬ್ಲೂ ಶರ್ಟ್ ಧರಿಸಿದ್ದವನನ್ನು ಪತ್ತೆ ಹಚ್ಚಿ, ಬ್ಲೂಶರ್ಟ್ ಹಾಕಿದ್ದವ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಆತನ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಂಡಿದ್ದೀರಿ ಎನ್ನುವುದನ್ನು ತಿಳಿಸಬೇಕು. ದಾಳಿಯ ಬಗ್ಗೆ ಸರಿಯಾದ ತನಿಖೆ ನಡೆಸಿ 7 ದಿನಗಳ ಒಳಗೆ ವರದಿ ಸಲ್ಲಿಸಿ ಎಂದರು.
ನೋಟಿಸ್ ಪಡೆದಿರುವ ಜಗದೀಶ್ ಶೆಟ್ಟರ್ ಅವರ ಸರ್ಕಾರ ಹಾಗೂ ಗೃಹಸಚಿವಾಲಯ 7 ದಿನಗಳೊಗೆ ಸೂಕ್ತ ಕ್ರಮ ಕೈಗೊಂಡು ವರದಿ ಸಲ್ಲಿಸಬೇಕಿದೆ. ಈ ವರದಿ ಆಧಾರಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೇ? ಬೇಡವೇ? ಎಂಬುದನ್ನು ಹೈಕೋರ್ಟ್ ನಿರ್ಧರಿಸಲಿದೆ.
ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಅಥವಾ ಕೈಗೊಂಡಿರುವ ಕ್ರಮ ಅಸಮರ್ಪಕವಾಗಿದೆ ಎಂದು ಕೋರ್ಟಿಗೆ ಮನವರಿಕೆಯಾದರೆ ಸಿಬಿಐ ಅಥವಾ ಸಿಬಿಐ ಮಟ್ಟದ ಸಂಸ್ಥೆಯಿಂದ ತನಿಖೆಗೆ ಆದೇಶಿಸುವ ಸಾಧ್ಯತೆಯಿದೆ.
ಗುವಾಹಟಿಯಲ್ಲಿ ನಡೆದ ಯುವತಿ ಮೇಲೆ ದೌರ್ಜನ್ಯ ಮತ್ತು ಮಂಗಳೂರಿನ ದೌರ್ಜನ್ಯಕ್ಕೂ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ. ಇಂತಹ ಕೃತ್ಯಗಳನ್ನು ನಡೆಸುವವರ ವಿರುದ್ಧ ಗೃಹ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಗೃಹ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಆ.7ರಂದು ನಡೆಯಲಿದೆ.
ಕಳೆದ ಶನಿವಾರ(ಜ.24) ಪಡೀಲ್ ನಲ್ಲಿರುವ ಹೋಂ ಸ್ಟೇ ನಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದ ವೇಳೆ ಅಲ್ಲಿಗೆ ಹಿಂದೂ ಜಾಗರಣ ವೇದಿಕೆಗೆ ಸೇರಿದ 40ಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ದಾಳಿ ಮಾಡಿ ಯುವತಿಯರ ಮೇಲೆ ದೈಹಿಕ ಹಲ್ಲೆ ನಡೆಸಿ, ಅಲ್ಲಿದ್ದ ಯುವಕರನ್ನು ಚೆನ್ನಾಗಿ ಥಳಿಸಿದ್ದರು. ಈ ಬಗ್ಗೆ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ(PIL) ದಾಖಲಿಸಲಾಗಿತ್ತು.
15 ಜನ ಬಂಧನ: ಪಡೀಲ್ ಹೋಂ ಸ್ಟೇ ಪ್ರಕರಣವನ್ನು ಖಂಡಿಸಿ ವಿದ್ಯಾರ್ಥಿಗಳು ಮಂಗಳೂರು ಕಾಲೇಜು ಬಂದ್ ಆಚರಿಸಿದ್ದರು. ವಿವಿಧ ಸಂಘಟನೆಗಳು, ಪ್ರತಿಪಕ್ಷಗಳು ಘಟನೆಯನ್ನು ಖಂಡಿಸಿದೆ. ಈವರೆಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ಬಿಪಿನ್ ಗೋಪಾಲಕೃಷ್ಣನ್ ಹೇಳಿದ್ದಾರೆ.
ವಾಮಂಜೂರು ಸಂತೋಷ್ ನಗರದ ವರುಣ್ ಪೂಜಾರಿ(20), ಕುಡುಪು ನಿವಾಸಿ ಪುನೀತ್ (19) ಹಾಗೂ ಗುರುಪುರ ಕೈಕಂಬದ ಕಿರಣ್ ಪೂಜಾರಿ(20) ಇತ್ತೀಚೆಗೆ ಬಂಧಿತರಾಗಿರುವ ಆರೋಪಿಗಳು. ಈ ನಡುವೆ ಪ್ರಕರಣ ನಡೆದಿರುವ ಮಾರ್ನಿಂಗ್ ಮಿಸ್ಟ್ ಹೋಂಸ್ಟೇಗೆ ಮಂಗಳೂರು ಮಹಾನಗರ ಪಾಲಿಕೆ ವಿವರಣೆ ಕೋರಿ ನೋಟಿಸ್ ಜಾರಿ ಮಾಡಿದೆ. ಮಂಗಳೂರಿನಲ್ಲಿ ಈ ವರೆಗೆ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಯಾವುದೇ ಹೋಂಸ್ಟೇ ಗೆ ಅನುಮತಿ ನೀಡಿಲ್ಲ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications