ಬಿಜೆಪಿ ಭ್ರಷ್ಟ ನಾಯಕರು ಮೇಲಿಂದ ಹಾರಿದರೆ ಮಳೆ!

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಇಬ್ರಾಹಿಂ, ಬರಪೀಡಿತ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಮೋಡ ಬಿತ್ತನೆ ಪ್ರಯೋಜನವಿಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ.
ಬಿಜೆಪಿಯಲ್ಲಿರುವ ಕೆಲವು ಭ್ರಷ್ಟ ನಾಯಕರು ಮೇಲಿಂದ ಹಾರಿದರೆ ಮಳೆ ಬರಬಹುದೇನೋ ಎಂದು ಕಿಲಕಿಲ ನಕ್ಕರು. ರಾಜ್ಯದ 150ಕ್ಕೂ ಹೆಚ್ಚು ತಾಲೂಕುಗಳು ಬರಕ್ಕೆ ತುತ್ತಾಗಿದೆ. ಇದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.
ಆದರೆ, ಬಿಜೆಪಿ ಮುಖಂಡರು ಹಣ ಹಾಗೂ ಜಾತಿ ರಾಜಕೀಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಅಪಾಯಕಾರಿ ಬೆಳವಣಿಗೆ. ಈ ಮೂಲಕ ಬಿಜೆಪಿ ನೈತಿಕ ಅರ್ಧಪತನದತ್ತ ಸಾಗಿದೆ ಎಂದರು.
ಬರಪೀಡಿತ ಜಿಲ್ಲೆಗಳಲ್ಲಿ ಸರಕಾರ ಕೈಗೊಂಡಿರುವ ಪರಿಹಾರ ಕಾಮಗಾರಿಗಳ ಕುರಿತು ಸಮಗ್ರ ಮಾಹಿತಿ ಯನ್ನು ಜನತೆಯ ಮುಂದಿಡಬೇಕು. ಸುಮ್ಮನೆ ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಿ ಜನರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸೇರಿದಂತೆ ಎಲ್ಲ ಸಚಿವರು ಕೂಡಲೇ ಮಾಡಬೇಕಿದೆ ಎಂದು ಇಬ್ರಾಹಿಂ ಆಗ್ರಹಿಸಿದರು.
ಆಪರೇಷನ್ ಕಮಲ ಪರಿಣಾಮ: 'ಮಾಡಿದ್ದುಣ್ಣೋ ಮಾರಾಯ' ಎಂಬಂತೆ ಬಿಜೆಪಿಗೆ ಇತರೆ ಪಕ್ಷಗಳಿಂದ ಶಾಸಕರನ್ನು ಕರೆ ತಂದ ಪರಿಣಾಮ ಪಕ್ಷಕ್ಕೆ ಹಾನಿಯಾಗಿದೆ. ಈ ಬಗ್ಗೆ ಆಗಾಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಪದೇ ಪದೇ ಹೇಳುತ್ತಿದ್ದರು, ಇತ್ತೀಚೆಗ್ ಮಾಜಿ ಸಿಎಂ ಸದಾನಂದ ಗೌಡ ಕೂಡಾ ಹೇಳಿದ್ದಾರೆ.
ನಾಲ್ಕೂವರೆ ವರ್ಷ ಆಡಳಿತ ನಡೆಸಿದ ಮೇಲೆ ಅವರಿಗೆ ಜ್ಞಾನೋದಯವಾಗಿದೆ. ಆಪರೇಷನ್ ಕಮಲ ಎಂಬ ಅನೈತಿಕತೆಯ ಮೂಲಕ ಜೆಡಿಎಸ್-ಕಾಂಗ್ರೆಸ್ ಪಕ್ಷದ ಶಾಸಕರನ್ನು ಖರೀದಿಸಿ ಸರಕಾರ ರಚಿಸಿದಾಗ ಅವರಿಗೆ ಈ ಬಗ್ಗೆ ಅರಿವಿರಲಿಲ್ಲವೇ ಎಂದು ಛೇಡಿಸಿದರು.
ಅಧಿಕಾರಕ್ಕಾಗಿ ನೀತಿ-ನಿಯಮಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಕೊನೆ ದಿನಗಳನ್ನು ಎಣಿಸುತ್ತಿದ್ದು, ಈ ವರ್ಷದ ಅಂತ್ಯದೊಳಗೆ ವಿಧಾನಸಭೆಗೆ ಚುನಾವಣೆ ನಡೆಯುವುದು ನಿಶ್ಚಿತ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಮತ್ತೆ ಅಧಿಕಾರಕ್ಕೆ ತರುವ ಧೃಢ ಸಂಕಲ್ಪವನ್ನು ಎಲ್ಲ ಮುಖಂಡರು ಮಾಡಿದ್ದೇವೆ ಎಂದು ಹೇಳಿದರು.












Click it and Unblock the Notifications