ಪಾರಿವಾಳ ಹಿಂದೆ ಹೋಗಿದ್ದ ಮೈಸೂರು ಬಾಲಕ ವಾಪಸ್
ಮೈಸೂರು, ಜುಲೈ 24: ಮೈಸೂರಿನ 13 ವರ್ಷ ಬಾಲಕನೊಬ್ಬ ಯಡವಟ್ಟು ಮಾಡಿಕೊಂಡಿದ್ದಾನೆ. ಪ್ರಾಣಿ ಪಕ್ಷಿಗಳ ಪ್ರೀತಿಗೆ ಹಂಬಲಿಸಿದ ಬಾಲ ಪಾರಿವಾಳದ ಪ್ರೀತಿಯಲ್ಲಿ ಮನೆ ಬಿಟ್ಟು ಹೋಗಿದ್ದಾನೆ. ಯಾವಾಗಪ್ಪಾ ತನ್ನ ಕಂದನ 'ದರ್ಶನ'ಭಾಗ್ಯ ಎಂದು ಅಜ್ಜಿ ಮರುಗುತ್ತಿದ್ದಾರೆ.
ತಾಜಾ ಸುದ್ದಿ: ಪಾರಿವಾಳ ಹಿಂದೆ ಹಾರಿಹೋಗಿದ್ದ ಮೈಸೂರಿನ 'ಕಬೂತರ್ ಬಾಲಕ' ಮರಳಿ ಗೂಡಿಗೆ ವಾಪಸಾಗಿದ್ದಾನೆ. ಕಳೆದ ವಾರ ಪಾರಿವಾಳಗಳ ಹಿಂದೆ ಹೋಗಿದ್ದ 13 ವರ್ಷದ ಬಾಲಕ ದರ್ಶನ್ ನಿನ್ನೆ ಸೋಮವಾರ ವಾಪಸಾಗಿದ್ದಾನೆ. ಈ ಬಗ್ಗೆ TV9 ನಲ್ಲಿ ಪ್ರಸಾರವಾದ ಸುದ್ದಿಯನ್ನು ಗ್ರಹಿಸಿದ ಹಿರಿಯರೊಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ದರ್ಶನನ್ನು ಗುರುತುಹಿಡಿದು ಮನೆಗೆ ತಂದು ಬಿಟ್ಟಿದ್ದಾರೆ.

ಹಿಂದಿನ ಸುದ್ದಿ: ನಾಲ್ಕು ದಿನಗಳ ಹಿಂದೆ ಪಾರಿವಾಳಗಳ ಹಿಂದೆ ಓಡಿಹೋದ ಬಾಲಕನ ಹೆಸರು ದರ್ಶನ್. ಅವರಪ್ಪ ಸತೀಶ್; ತಾಯಿ ನಾಲ್ಕು ವರ್ಷಗಳ ತೀರಿಕೊಂಡಿದ್ದಾರೆ. ಅಜ್ಜಿಯ ಮಡಿಲಲ್ಲೇ ಬಾಲಕ ದರ್ಶನ್ ಬೆಳೆಯುತ್ತಿದ್ದ. ಅಂಗವಿಕಲೆ ಅಕ್ಕ ಸಹ ಜತೆಗಿದ್ದಳು.
ಆದರೆ ಅಮ್ಮ 4 ವರ್ಷಗಳ ಹಿಂದೆ ಅಮ್ಮನನ್ನು ಕಳೆದುಕೊಂಡ ದರ್ಶನ್ ಮೊದಲು ಮೀನುಗಳಲ್ಲಿ ತಾಯಿ ಪ್ರೀತಿಯನ್ನು ಕಂಡುಕೊಳ್ಳತೊಡಗಿದ. ಮನೆಯಲ್ಲಿ ಮೀನುಗಳನ್ನು ಸಾಕತೊಡಗಿದ. ಆದರೆ ಬಾಡಿಗೆ ಮನೆಯಲ್ಲಿ ಇದೆಲ್ಲಾ ಬೇಡ ಕಂದ ಎಂದು ಅಪ್ಪ ಸತೀಶ್ ಬುದ್ಧಿವಾದ ಹೇಳಿದ್ದಾರೆ. ಅಜ್ಜಿಯೂ ಬೇಡ. ಬೇರೆ ಏನಾದರೂ ಆಡಿಕೋ ಕಂದಾ ಎಂದಿದ್ದಾರೆ. ಸರಿ ಎಂದು ದೊಡ್ಡವರ ಸಂಕಟ ಅರ್ಥ ಮಾಡಿಕೊಂಡು ಸುಮ್ಮನಾಗಿದ್ದಾನೆ.
ಆದರೂ ಪ್ರೀತಿಗೆ ಹಂಬಲಿಸುತ್ತಿದ್ದ ಬಾಲಕನ ಕಣ್ಣಿಗೆ ಅದೊಂದು ದಿನ ಪಾರಿವಾಳಗಳು ಕಂಡಿವೆ. ಅಂದಿನಿಂದಲೇ ಪಾರಿವಾಳಗಳನ್ನು ಮುದ್ದಿಸುತ್ತಾ, ಅದಕ್ಕೆ ಕಾಳು ಹಾಕಿದ್ದಾನೆ. ಅಪ್ಪ ಹಿಂದಿನಂತೆ, ಅದೆಲ್ಲ ಗಲೀಜು ಮಾಡುತ್ತೆ. ಬಾಡಿಗೆ ಮನೆ ಬೇರೆ ಎಂದು ವರಾತ ತೆಗೆದಿದ್ದಾರೆ. ಒಂದಷ್ಟು ಜೋರಾಗಿಯೇ ಬುದ್ಧಿಮಾತು ಹೇಳಿದ್ದಾರೆ.
ಅದೇನನಿಸಿತೋ. ಏನು ಎಡವಟ್ಟು ಮಾಡಿಕೊಂಡನೋ ಬಾಲಕ ನಾಲ್ಕು ದಿನಗಳ ಹಿಂದೆ ಮನೆಬಿಟ್ಟು ಹೋಗಿದ್ದಾನೆ. ಅಪ್ಪ ಸತೀಶ್ ಕೆಸಲಕ್ಕೆ ಹೋಗುವುದನ್ನು ನಿಲ್ಲಿಸಿ, ಮಗನಿಗಾಗಿ ಮನೆ ಮನೆ ಹುಡುಕುತ್ತಿದ್ದಾರೆ. ಇದ್ದಬದ್ದ ಸ್ನೇಹಿತರನ್ನೆಲ್ಲ ವಿಚಾರಿಸುತ್ತಿದ್ದಾರೆ.
ಅಜ್ಜಿಯಂತೂ 'ನನ್ನ ಮೊಮ್ಮಗನನ್ನು ಕಂಡಿರಾ?' ಎಂದು ಮನೆ ಮುಂದೆ ಹಾರಾಡುವ ಪಾರಿವಾಳಗಳನ್ನು ಕೇಳುತ್ತಿದ್ದಾರೆ. ಅಜ್ಜಿಗೆ 'ದರ್ಶನ' ಭಾಗ್ಯ ಸಿಕ್ಕಿಲ್ಲ. ನೋಡಬೇಕು, TV9 ಈ ಸುದ್ದಿಯನ್ನು ಇಂದು ಶನಿವಾರ ಪ್ರಸಾರ ಮಾಡಿದೆ. ಆದನ್ನು ನೋಡಿಯಾದರೂ ದರ್ಶನ್, ಮರಳಿ ಅಜ್ಜಿಯ ಮಡಿಲು ಸೇರಿಕೊಳ್ಳುತ್ತಾನಾ!?












Click it and Unblock the Notifications