• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಂಗಕ್ಕಿಳಿಯದೆ ಯುದ್ಧ ಗೆದ್ದ ಛಲದಂಕಮಲ್ಲ ಯಡಿಯೂರಪ್ಪ

By Prasad
|
Yeddyurappa has the last laugh
ಬೆಂಗಳೂರು, ಜು. 4 : ಮುಖ್ಯಮಂತ್ರಿಯ ವಿರುದ್ಧ ಯಾವುದೇ ಗುರುತರ ಆರೋಪಗಳಿಲ್ಲ, ಅವರು ಯಾವುದೇ ಭ್ರಷ್ಟಾಚಾರದಲ್ಲಿ, ಯಾವುದೇ ಹಗರಣದಲ್ಲಿ ಭಾಗಿಯಾಗಿಲ್ಲ, ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ, ಹಿರಿಯರಿಂದ ಶಭಾಸ್‌ಗಿರಿ ಕೂಡ ಪಡೆದಿದ್ದರು. ಆದರೂ ಕರ್ನಾಟಕದಲ್ಲಿ ಮುಖ್ಯಮಂತ್ರಿಯ ಬದಲಾವಣೆಯಾಗಲಿದೆ. ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ಪದಚ್ಯುತಿಯಾಗಿ ಜಗದೀಶ್ ಶೆಟ್ಟರ್ ಅವರ ಪ್ರತಿಷ್ಠಾಪನೆಗೆ ವೇದಿಕೆ ಸಿದ್ಧವಾಗಿದೆ. ಅಂತಿಮ ನಗೆ ಯಡಿಯೂರಪ್ಪನವರದಾಗಿದೆ.

ಯಡಿಯೂರಪ್ಪನವರ ಹಠದ ಮುಂದೆ ಸದಾನಂದ ಗೌಡ ಮತ್ತು ಈಶ್ವರಪ್ಪ ಅವರ ಹೋರಾಟ ಸೋತಿದೆ. ಹೆಚ್ಚಿನ ಪ್ರತಿರೋಧ ಒಡ್ಡದೆ ಶಸ್ತ್ರಾಸ್ತ್ರವನ್ನು ಇವರಿಬ್ಬರು ಕೆಳಗಿಟ್ಟಾಗಿದೆ. ಬೇಕಾದ್ದಾಗಲಿ ನಾನು ಹೇಳಿದಂತೆಯೇ ನಡೆಯಬೇಕು ಎಂದು ಹಠ ತೊಟ್ಟಿದ್ದ ಯಡಿಯೂರಪ್ಪನವರಿಗೆ, ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಸೇರಿದಂತೆ ದೆಹಲಿಯಲ್ಲಿ ಕುಳಿತಿರುವ ಎಲ್ಲ ಹಿರಿಯ ನಾಯಕರು ತಲೆಬಾಗಿದ್ದಾರೆ. ಕೊನೆಗೂ ತಮ್ಮ ತಾಕತ್ತು ಏನೆಂಬುದನ್ನು ಯಡಿಯೂರಪ್ಪ ಅವರು ತೋರಿಸಿಕೊಟ್ಟಿದ್ದಾರೆ.

ದೆಹಲಿಯ ನಾಯಕರಿಗೆ ಸರಕಾರ ಬೀಳುವುದು ಬೇಕಿರಲಿಲ್ಲ. ಚುನಾವಣೆ ಘೋಷಣೆಯಾದರೆ ಯಡಿಯೂರಪ್ಪನವರ ಬಲವಿಲ್ಲದೆ ಗೆಲ್ಲುವ ಎದೆಗಾರಿಕೆಯೂ ಬಿಜೆಪಿ ಹೈಕಮಾಂಡಿಗೆ ಇಲ್ಲ. ಮುಖ್ಯಮಂತ್ರಿ ಪಟ್ಟದಲ್ಲಿ ಯಾರಿದ್ದರೇನಂತೆ, ಒಟ್ಟಿನಲ್ಲಿ ಬಿಜೆಪಿ ಸರಕಾರ ಇರಬೇಕು, ಯಡಿಯೂರಪ್ಪ ಬಿಜೆಪಿಯಲ್ಲಿಯೇ ಉಳಿಯಬೇಕು ಎಂಬ ನಿರ್ಧಾರಕ್ಕೆ ಬಂದ ಹೈಕಮಾಂಡ್ ಶೆಟ್ಟರ್ ಅವರಿಗೆ ಪಟ್ಟ ನೀಡಲು ಅಂತಿಮವಾಗಿ ಒಪ್ಪಿಗೆ ನೀಡಿದೆ.

ಆರಂಭದಲ್ಲಿ ಪ್ರತಿರೋಧ ತೋರಿದರೂ, ಶಾಸಕರ ಬಲ, ಹೈಕಮಾಂಡಿನ ಬೆಂಬಲ ದೊರೆಯದೆ, ಪ್ರಬಲ ಯಡಿಯೂರಪ್ಪನವರ ಗಟ್ಟಿತನದ ಮುಂದೆ ಡಿವಿ ಸದಾನಂದ ಗೌಡ ಮತ್ತು ಈಶ್ವರಪ್ಪ ಸೋಲೊಪ್ಪಿಕೊಂಡಿದ್ದಾರೆ. ಸದಾನಂದ ಗೌಡರ ಮುಂದಿನ ರಾಜಕೀಯ ಭವಿಷ್ಯ ಸದ್ಯಕ್ಕೆ ಡೋಲಾಯಮಾನವಾಗಿದೆ. ಸಂಸದ ಪಟ್ಟವನ್ನೂ ಕಳೆದುಕೊಂಡಿರುವ ಸದಾನಂದ ಗೌಡರಿಗೆ ದೆಹಲಿಯಲ್ಲಿ ಉನ್ನತ ಸ್ಥಾನ ನೀಡುತ್ತಾರಾ ಅಥವಾ ಪಕ್ಷದ ಸಂಘಟನೆಗೆಂದು ರಾಜ್ಯದಲ್ಲಿಯೇ ಉಳಿಸಿಕೊಳ್ಳುತ್ತಾರಾ?

ದೆಹಲಿಯಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರ ಪ್ರಾಬಲ್ಯವೂ ಕ್ಷೀಣಿಸುತ್ತಿರುವುದಕ್ಕೆ ಪ್ರಸ್ತುತ ರಾಜಕೀಯ ವಿದ್ಯಮಾನಗಳಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ಮುಖ್ಯಮಂತ್ರಿ ಬದಲಾವಣೆಯ ನಿರ್ಧಾರ ತಳೆಯುವುದಕ್ಕಿಂತ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಸಿದ್ಧರಾಗುವುದೇ ಲೇಸೆಂದು ಅಪ್ಪಣೆ ನೀಡಿದ್ದ ಹಿರಿಯ ಜೀವ, ಕಡೆಗೂ ಇತರ ನಾಯಕರ ಒತ್ತಡಕ್ಕೆ ಮಣಿದಿದ್ದಾರೆ. ಯಡಿಯೂರಪ್ಪನವರ ಕಟ್ಟಾ ವಿರೋಧಿಯಾಗಿದ್ದ ಅಡ್ವಾಣಿ ವಿರುದ್ಧ ಯಡಿಯೂರಪ್ಪ ಸೈದ್ಧಾಂತಿಕ ಯುದ್ಧ ಗೆದ್ದಿದ್ದಾರೆ.

ಈ ಬದಲಾವಣೆ ಇನ್ನು ಎಷ್ಟು ದಿನ? : ಸಿಎಂ ಬದಲಾವಣೆಯ ಜೊತೆಗೆ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಯಾಗುವುದು ಹೆಚ್ಚೂಕಡಿಮೆ ಖಚಿತವಾಗಿದೆ. ಆದರೆ, ಈ ಪಟ್ಟ ಯಾರಿಗೆ ಒಲಿಯಲಿದೆ? ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳೇ ಸಾಲುಸಾಲು ನಿಂತಿದ್ದರು. ಈಗ ಆ ಆಕಾಂಕ್ಷೆಯ ನೀರಿನಗುಳ್ಳೆ ಒಡೆದಿದ್ದು, ಡಿಸಿಎಂ ಹುದ್ದೆಗೆ ಮತ್ತೆ ಹೊಡೆದಾಟ ಆರಂಭವಾಗಲಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಡಿಸಿಎಂ ಹುದ್ದೆ ಸೃಷ್ಟಿಸಲಾಗುತ್ತಿದೆ ಎಂದು ಆರ್ ಅಶೋಕ್ ಅವರು ಹೇಳಿಕೆ ನೀಡಿ ಅನೇಕ ಸುಳಿವನ್ನು ನೀಡಿದ್ದಾರೆ.

ಹಾಗಿದ್ದರೆ, ಮುಖ್ಯಮಂತ್ರಿ ಪದವಿ ಬದಲಾವಣೆ ಮಾಡಿದ್ದೂ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದಾರಾ? ಒಬ್ಬ ನಾಯಕರಾಗಿ ಜಗದೀಶ್ ಶೆಟ್ಟರ್ ಅವರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ಬಿಜೆಪಿ ಹೈಕಮಾಂಡಿಗೆ ಇದೆಯಾ? ಹೈಕಮಾಂಡನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಬಿಕ್ಕಟ್ಟು ಇಲ್ಲಿಗೆ ಶಮನವಾಯಿತಾ? ಡಿಸಿಎಂ ಹುದ್ದೆ ಯಾರಿಗೆ ನೀಡಲಿದ್ದಾರೆ? ಸಂಪುಟದಲ್ಲಿ ಯಾರ ಬಣಕ್ಕೆ ಹೆಚ್ಚಿನ ಮನ್ನಣೆ ದೊರೆಯಲಿದೆ? ಯುದ್ಧ ರಂಗಕ್ಕೆ ಇಳಿಯದೆಯೆ ಯುದ್ಧ ಗೆದ್ದಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮುಂದಿನ ನಡೆ ಏನು? ಉತ್ತರಗಳಿಗಾಗಿ ಈ ಬೃಹನ್ನಾಟಕದ ಮುಂದಿನ ಅಂಕಕ್ಕಾಗಿ ಕಾಯಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಯಡಿಯೂರಪ್ಪ ಸುದ್ದಿಗಳುView All

English summary
Powerful politician BS Yeddyurappa has the last laugh. BSY has won the battle with BJP high command without getting into battle field. Sadananda Gowda has put the sword down without fight. Ultimately high command has bowed to invincible Yeddyurappa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more