ಬದಲಾವಣೆ ವಿಳಂಬವಾದರೆ ಬಿಎಸ್‌ವೈ ಏನ್ಮಾಡ್ತಾರೆ?

ಯಡಿಯೂರಪ್ಪ ಅವರ ಆಪ್ತ ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಸದ್ಯಕ್ಕೆ ಕಾಂಗ್ರೆಸ್ ಟೈ ಬಾಂಬ್ ಅನ್ನು ಬೆನ್ನಿಗೆ ಕಟ್ಟಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಒಂದೊಂದು ಘಳಿಗೆಯೂ ಅಮೂಲ್ಯ. 'ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಣಬ್ ಮುಖರ್ಜಿ ಅವರಿಗೆ ಅಡ್ಡ ಮತ ಹಾಕುವುದಾಗಿ ಯಡಿಯೂರಪ್ಪ ಸೋನಿಯಾ ಮುಂದೆ ಪ್ರಮಾಣ ಮಾಡಿದ್ದಾರೆ' ಎನ್ನಲಾಗಿದೆ.
ಅದಕ್ಕೆ ಕಾಂಗ್ರೆಸ್ಸಿನಿಂದ ಏನು ಪ್ರತಿಫಲ ನಿರೀಕ್ಷಿಸುತ್ತಿದ್ದಾರೆ ಎಂಬುದೂ ಜಗತ್ತಿಗೆ ತಿಳಿದ ವಿಷಯವಾಗಿದೆ. ಹಾಗಾಗಿ ಯಡಿಯೂರಪ್ಪನವರು ರಾಷ್ಟ್ರಪತಿ ಚುನಾವಣೆ ದಿನವಾದ ಜುಲೈ 19ರವರೆಗೂ ಕಾಯುವುದು ಅನುಮಾನ, ಅನುಮಾನ.
ಆದರೆ ಈ ಮಧ್ಯೆ buying the time ಎನ್ನುವಂತೆ ಬಿಜೆಪಿ ಹೈಕಮಾಂಡ್ ಹಾಗೂ ಹೀಗೂ ರಾಷ್ಟ್ರಪತಿ ಚುನಾವಣೆವರೆಗೆ ಅಂದರೆ, ಈ ತಿಂಗಳ 19ರವರೆಗೆ ಬಿಕ್ಕಟ್ಟಿನ ವಿಷಯವನ್ನು ಎಳೆದುಕೊಂಡು ಹೋಗುವ ಉದ್ದೇಶ ಹೊಂದಿರುವಂತೆ ಕಂಡು ಬರುತ್ತಿದೆ. ಆದರೆ ಯಡಿಯೂರಪ್ಪ ಬಣದ ಒತ್ತಡ ತೀವ್ರಗೊಂಡಲ್ಲಿ ಅದಕ್ಕೂ ಮೊದಲೇ ನಿರ್ಧಾರ ಪ್ರಕಟಿಸಬೇಕೋ, ಬೇಡವೋ? ಎಂಬ ಧರ್ಮ ಸಂಕಟದಲ್ಲಿ ಸಿಕ್ಕಿ ಒದ್ಲಾಡುವುದಂತೂ ಶತಸಿದ್ಧ.
ಮತ್ತೊಂದು ಗಡುವು ಹೀಗಿದೆ: ಈ ತಿಂಗಳ 16 ರಿಂದ ವಿಧಾನಮಂಡಲದ ಅಧಿವೇಶನ ನಡೆಸುವ ಜರೂರತ್ತು ಬಹಳಷ್ಟಿದೆ. ಈ ಸಂಬಂಧ ನಿರ್ಣಯ ಕೈಗೊಳ್ಳಲು ಹಾಲಿ ಮುಖ್ಯಮಂತ್ರಿ ಸದಾನಂದಗೌಡರು ಗುರುವಾರ ಸಂಪುಟ ಸಭೆ ನಡೆಸಿಬಿಟ್ಟರೆ!? ಅಧಿವೇಶನದ ನೆಪವೊಡ್ಡಿ ನಾಯಕತ್ವ ಬದಲಾವಣೆಯನ್ನು ಬಿಜೆಪಿ ನಾಯಕರು ಮುಂದೂಡಿದರೆ?
ಹಾಗಾಗಿಯೇ, ಇದೆಲ್ಲವನ್ನೂ ಮೊದಲೇ ಬಲ್ಲ ಯಡಿಯೂರಪ್ಪ ಪಾಳೆಯ ವಿಧಾನಮಂಡಲ ಅಧಿವೇಶನದೊಳಗಾಗಿ ಬದಲಾವಣೆ ಆಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿರುವುದು ಮತ್ತು ರಾಷ್ಟ್ರಪತಿ ಚುನಾವಣೆವರೆಗೆ ಕಾಯುವುದು ಸಾಧ್ಯವಿಲ್ಲ ಎಂದಿರುವುದು. ತಕ್ಷಣ ಬಿಜೆಪಿ ನಾಯಕರ (ಮುಖ್ಯವಾಗಿ ಅಡ್ವಾಣಿಯವರ) ನಿರ್ಧಾರ ಹೊರಬೀಳಲೇ ಬೇಕಾಗಿದೆ.
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ, ಜಗದೀಶ್ ಶೆಟ್ಟರ್ ಅವರು ಮುಂದಿನ ಮುಖ್ಯಮಂತ್ರಿ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುರಾತನ ಬೇಡಿಕೆಗೆ ಮಣಿದಿರುವ ಬಿಜೆಪಿ ಹೈಕಮಾಂಡ್ ಸದಾನಂದ ಗೌಡರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸುವುದಕ್ಕೆ ಸಮ್ಮತಿ ಸೂಚಿಸಿದೆ ಎಂದು ವರದಿಯಾಗಿದೆ.











Click it and Unblock the Notifications