ಜಗನ್ ಜಾಮೀನು ಇಲ್ಲ, ರಾಮ್ ಜೇಠ್ಮಲಾನಿ ವೈಫಲ್ಯ

ಜು.18ರವರೆಗೂ ಜಗನ್ ಮೋಹನ್ ರೆಡ್ಡಿ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾ. ಎಸ್ ಗೋವಿಂದರಾಜು ಆದೇಶ ಹೊರಡಿಸಿದ್ದಾರೆ. ಜಗನ್ ಅವರ ರಕ್ಷಣೆ, ಜಾಮೀನು ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರ ಮನೆ ಬಾಗಿಲು ತಟ್ಟಿದ್ದ ಜಗನ್ ಅವರ ತಾಯಿ ವಿಜಯಮ್ಮ ಅವರಿಗೆ ಈ ಸುದ್ದಿ ಕೇಳಿ ತೀವ್ರ ದುಃಖವಾಗಿದೆ.
ಚಂಚಲಗೂಡ ಜೈಲಿಗೆ ಬಂದು ಸುಮಾರು 37 ದಿನಗಳ ಕಾಲ ಕಾಲ ಕಳೆದಿರುವ ಜಗನ್ ಮೇಲೆ ಸುಮಾರು 43,000 ಕೋಟಿ ಅಕ್ರಮ ಆಸ್ತಿ ಗಳಿಸಿದ ಆರೋಪವಿದೆ. ಜಗನ್ ಜಾಮೀನು ಬಗ್ಗೆ ಜೂ.28ರಂದು ತೀರ್ಪು ಪ್ರಕಟಿಸಬೇಕಿದ್ದ ನ್ಯಾಯಾಲಯ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿತ್ತು.
ಮೇ.27ರಂದು ಸಿಬಿಐನಿಂದ ಬಂಧನಕ್ಕೊಳಗಾದ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರ ಜಗನ್ ಅವರು ಅತ್ಯಂತ ಪ್ರಭಾವಿ ವ್ಯಕ್ತಿ, ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಸಾಕ್ಷ್ಯ ನಾಶ, ಸಾಕ್ಷಿಗಳಿಗೆ ಬೆದರಿಕೆ ಒಡ್ಡುವ ಸಾಧ್ಯತೆಯಿದೆ ಎಂದು ಸಿಬಿಐ ಪರ ವಕೀಲ ಅಶೋಕ್ ಬಾನ್ ಅವರು ಸಮರ್ಧವಾಗಿ ವಾದ ಮಂಡಿಸಿದರು.
ಜಗನ್ ಬಂಧನ ರಾಜಕೀಯ ಪ್ರೇರಿತವಾಗಿದ್ದು, ಅಕ್ರಮವಾಗಿ ಬಂಧಿಸಲಾಗಿದೆ. ಪ್ರಜಾಪ್ರಭುತ್ವ ವಿರೋಧಿ ತಂತ್ರವನ್ನು ಸಿಬಿಐ ಅನುಸರಿಸಿದೆ ಎಂದು ರಾಮ್ ಜೇಠ್ಮಲಾನಿ ವಾದಿಸಿದರು. ಆದರೆ, ನ್ಯಾ ಎಸ್ ಗೋವಿಂದರಾಜು ಅವರು ಸಿಬಿಐ ಪರ ವಕೀಲರ ವಾದವನ್ನು ಪುರಸ್ಕರಿಸಿದರು.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತಂಡ ಈವರೆಗೂ ನಾಲ್ಕು ಚಾರ್ಚ್ ಶೀಟ್ ಗಳನ್ನು ಕೋರ್ಟಿಗೆ ಸಲ್ಲಿಸಿದೆ. ಜಗನ್ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.
ಸಿಬಿಐ ಮಾಡಿರುವ ಆರೋಪಗಳು: ಸುಮಾರು 850 ಕೋಟಿ ರು ಬಂಡವಾಳ ಹೂಡಿಕೆ ಲೆಕ್ಕ ಇನ್ನೂ ಸಿಕ್ಕಿಲ್ಲ. ಅಲ್ಲದೆ, ಜಗನ್ ಸೃಷ್ಟಿಸಿದ ಬೇನಾಮಿ ಕಂಪನಿಗಳ ಅಸಲಿ ಮೌಲ್ಯ, ಕೂಡಿಟ್ಟ ಹಣ, ಇತರೆ ಬ್ಯಾಂಕ್ ಖಾತೆಗಳಿಗೆ ವರ್ಗವಾದ ಮೊತ್ತದ ಲೆಕ್ಕ ಕೂಡಾ ಸಿಗಬೇಕಿದೆ.
ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಗನ್ ಮೋಹನ್ ರೆಡ್ಡಿ ಕೈಗಾರಿಕಾ ವಲಯದಲ್ಲಿ ಅಕ್ರಮ ಎಸೆಗಿರುವ ಆಸ್ತಿಯ ಬಗ್ಗೆ ಮಾತ್ರ ದಾಖಲೆಗಳನ್ನು ಸಂಗ್ರಹಿಸಿ ನಾಲ್ಕು ಎಫ್ ಐಆರ್ ದಾಖಲಿಸಲಾಗಿದೆ.
ಇದರಲ್ಲಿ ಜಗತಿ ಪಬ್ಲಿಕೇಷನ್, ಸಾಕ್ಷಿ ಪತ್ರಿಕೆಯನ್ನು ಸೇರಿಸಲಾಗಿದ್ದು, 350ಕ್ಕೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ. ಜಗನ್ ಅವರ ಆಸ್ತಿ 16,97,335 ಕೋಟಿ ರು ಎಂದು ಟಿಡಿಪಿ ಮಾಡಿರುವ ಆರೋಪದ ಬಗ್ಗೆ ಇನ್ನೂ ಸಿಬಿಐ ಕಣ್ಣಿಟ್ಟಿಲ್ಲ.
ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಮೂರು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.












Click it and Unblock the Notifications