ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೆಟ್ಟರ್ ಬಿಟ್ಟು 8 ಸಚಿವರು ರಾಜೀನಾಮೆಗೆ ಸಿದ್ಧತೆ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಜೂ.28: ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆ ಬಿಕ್ಕಟ್ಟಿಗೆ ಹೈಕಮಾಂಡ್ ನೀಡಿದ ಪರಿಹಾರದ ವಿರುದ್ಧ ಯಡಿಯೂರಪ್ಪ ಬಣ ತಿರುಗಿಬಿದ್ದಿದೆ. ರಾಷ್ಟ್ರಪತಿ ಚುನಾವಣೆ ತನಕ ಸಿಎಂ ಸದಾನಂದ ಗೌಡರ ನಾಯಕತ್ವ ಬದಲಾವಣೆ ಇಲ್ಲ ಎಂದು ನಿತಿನ್ ಗಡ್ಕರಿ ಸೂಚನೆ ನೀಡಿದ ಮೇಲೆ ಯಡಿಯೂರಪ್ಪ ಬಣ ಸಾಮೂಹಿಕ ರಾಜೀನಾಮೆಗೆ ಮುಂದಾಗಿದೆ. ಜಗದೀಶ್ ಶೆಟ್ಟರ್ ಬಿಟ್ಟು ಉಳಿದ ಸಚಿವರು ಸಂಪುಟ ತೊರೆಯಲು ನಿರ್ಧರಿಸಿದ್ದಾರೆ ಎಂದು ಶಾಸಕ ಬಿಪಿ ಹರೀಶ್ ಹೇಳಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯ ಬಗ್ಗೆ ಇಂದೇ ನಿರ್ಧಾರ ತೆಗೆದುಕೊಳ್ಳಬೇಕು. ನೈತಿಕ ಹೊಣೆ ಹೊತ್ತು ಸದಾನಂದ ಗೌಡರು ರಾಜೀನಾಮೆ ನೀಡಬೇಕು ಇಲ್ಲದಿದ್ದರೆ ಇಂದು ಸಂಜೆ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಎಂಟು ಸಚಿವರು ರಾಜೀನಾಮೆ ಪತ್ರ ಸಲ್ಲಿಸಲು ನಿರ್ಧರಿಸಿದ್ದೇವೆ ಎಂದು ಬಿಪಿ ಹರೀಶ್ ಹೇಳಿದ್ದಾರೆ.

ಶುಕ್ರವಾರ ಜಗದೀಶ್ ಶೆಟ್ಟರ್ ನಿವಾಸದಲ್ಲಿ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಲ್ಲಿ ಎಂಟು ಮಂದಿ ಸಚಿವರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದು ಸಂಜೆ ಸದಾನಂದ ಗೌಡರಿಗೆ ರಾಜೀನಾಮೆ ಸಲ್ಲಿಸುವುದಾಗಿ ಅವರು ಹೇಳಿದ್ದಾರೆ. ಈಗಾಗಲೇ ರಾಜೀನಾಮೆ ಪತ್ರಗಳು ಸಿಎಂ ಉದಾಸಿ ಅವರ ಕೈ ಸೇರಿದೆ.

ಹೈಕಮಾಂಡ್ ಈ ಕೂಡಲೇ ಮಧ್ಯ ಪ್ರವೇಶಿಸಬೇಕು. ನಾವು ವರಿಷ್ಠರಿಗೆ 48 ಗಂಟೆಗಳ ಕಾಲ ಗಡುವು ನೀಡಿದ್ದೇವೆ. ಇದರ ಒಳಗೆ ತೀರ್ಮಾನ ಕೈಗೊಳ್ಳದಿದ್ದರೆ ನಮ್ಮ ನಿರ್ಧಾರ ತೆಗೆದುಕೊಳ್ಳುತ್ತೇವೆ. ಶಾಸಕಾಂಗ ಪಕ್ಷ ಕರೆಯಬೇಕು. ಇಲ್ಲವಾದಲ್ಲಿ ನಾಯಕತ್ವ ಬದಲಾವಣೆ ಮಾಡಬೇಕು ಎಂದು ಯಡ್ಡಿ ಬಣದ ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಸದಾನಂದ ಪ್ರತಿಕ್ರಿಯೆ: ಮಂಡ್ಯ ಜಿಲ್ಲೆ ನಿಮಿಷಾಂಬಾ ದೇಗುಲ, ಮೈಸೂರಿನ ಚಾಮುಂಡಿ ದೇಗುಲ ಭೇಟಿ ನೀಡಿ ಮಡಿಕೇರಿಗೆ ಹೊರಟ ಸಿಎಂ ಸದಾನಂದ ಗೌಡರು, ರಾಜೀನಾಮೆ ಬೆದರಿಕೆಗೆ ಬಗ್ಗುವುದಿಲ್ಲ. ಹೈಕಮಾಂಡ್ ನೀಡಿದ ಸೂಚನೆ ಮೇರೆಗೆ ನಾನು ನನ್ನ ಕರ್ತವ್ಯವನ್ನು ನಿಭಾಯಿಸುತ್ತಿದ್ದೇನೆ. ಈ ರೀತಿ ಬೆದರಿಕೆ ಹೊಸದೇನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಈಗಾಗಲೇ ಸಚಿವರ ರಾಜೀನಾಮೆ ನಂತರ ಖಾತೆಗಳ ಭಾರದಿಂದ ತತ್ತರಿಸಿರುವ ಮುಖ್ಯಮಂತ್ರಿ ಸದಾನಂದ ಗೌಡ ಹಾಗೂ ಪಕ್ಷದ ಹೈಕಮಾಂಡನ್ನು ಏಕ ಕಾಲಕ್ಕೆ ಇಕ್ಕಟ್ಟಿಗೆ ಸಿಕ್ಕಿಸುವುದು ಯಡಿಯೂರಪ್ಪ ಬಣದ ಉದ್ದೇಶ.

ರಾಜೀನಾಮೆ ಪರ್ವ: ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಜಗದೀಶ್ ಶೆಟ್ಟರ್ ಹಾಗೂ ಸಿಎಂ ಉದಾಸಿ ಹೊರತುಪಡಿಸಿ ಉಳಿದ ಬೆಂಬಲಿಗರು ರಾಜೀನಾಮೆ ನೀಡಲಿದ್ದಾರೆ. ಯಡಿಯೂರಪ್ಪ ಬೆಂಬಲಿಗ ಸಚಿವರಾದ ಶೋಭಾ ಕರಂದ್ಲಾಜೆ, ಉಮೇಶ್ ಕತ್ತಿ, ವಿ.ಸೋಮಣ್ಣ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ರಾಜೂಗೌಡ ಸೇರಿದಂತೆ ಎಂಟು ಮಂದಿ ಸಚಿವರು ನೇರವಾಗಿ ಮುಖ್ಯಮಂತ್ರಿಯವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವ ನಿರ್ಧಾರ ಕೈಗೊಂಡಿದ್ದಾರೆ.

ಶಾಸಕಾಂಗ ಸಭೆ ಕರೆಯದೆ ಶಾಸಕರು, ಸಚಿವರನ್ನು ನಿರ್ಲಕ್ಷಿಸಿರುವ ಸದಾನಂದ ಗೌಡರ ಮೇಲೆ ಕಾರ್ಯಕರ್ತರು ವಿಶ್ವಾಸ ಕಳೆದುಕೊಂಡಿದ್ದಾರೆ. ಪಕ್ಷ ಇಬ್ಭಾಗವಾಗುವುದನ್ನು ತಪ್ಪಿಸಿ ಸರ್ಕಾರವನ್ನೂ ಉಳಿಸಿಕೊಳ್ಳಲು, ಮುಂದಿನ ಚುನಾವಣೆಯಲ್ಲಿ ವಿಜಯ ಪತಾಕೆ ಹಾರಿಸಲು ಯಡಿಯೂರಪ್ಪ ಅವರ ನಾಯಕತ್ವ ಅಗತ್ಯವಿದೆ ಎಂದು ಯಡಿಯೂರಪ್ಪ ಬೆಂಬಲಿಗರು ಹೇಳಿದ್ದಾರೆ

ಸದಾನಂದ ಗೌಡ ಅವರಿಗೆ ಜಾರಕಿಹೊಳಿ ಸೇರಿದಂತೆ ಹತ್ತಾರು ಶಾಸಕರ ಬೆಂಬಲ ಮಾತ್ರ ಇದೆ ಎನ್ನಲಾದರೂ, ಸದಾನಂದ ಗೌಡರ ಕುರ್ಚಿಗೆ ಆಪತ್ತು ಬಂದರೆ 20ಕ್ಕೂ ಅಧಿಕ ಶಾಸಕರು ರಾಜೀನಾಮೆ ನೀಡಲು ಸಿದ್ಧರಾಗಿದ್ದಾರೆ. ಯಡಿಯೂರಪ್ಪ ಬಣದ ರಾಜೀನಾಮೆ ಅಸ್ತ್ರಕ್ಕೆ ಪ್ರತ್ಯಾಸ್ತ್ರವನ್ನು ಜಾರಕಿಹೊಳಿ ಬಣ ಸಿದ್ಧಪಡಿಸಿದೆ.

English summary
Former CM BS Yeddyurappa aides threat BJP High command with mass resignation drive today(Jun.29).Except Jagadish Shettar, CM Udasi others likely to resign demanding over change of leadership in Karnataka and Assembly Election preparation with BSY as leader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X