ಸದಾನಂದ ಗೌಡರಿಂದ ಇಂದು ಮಹತ್ವವಾದ ಪ್ರಕಟಣೆ ನಿರೀಕ್ಷೆ

ಗಮನಾರ್ಹವೆಂದರೆ ಸದ್ಯಕ್ಕೆ ಮುಖ್ಯಮಂತ್ರಿ ಕುರ್ಚಿಯಲ್ಲಿ ವಿರಾಜಮಾನವಾಗಿರುವ ಡಿವಿ ಸದಾನಂದ ಗೌಡ ಸಹ ಕೊನೆಯವರೆಗೂ (ಸದಾನಂದರ ನಡೆನುಡಿಗಳನ್ನು ಗಮನಿಸಿದರೆ ಆ ಕೊನೆ ಅತಿಸನಿಹದಲ್ಲೇ ಇದೆ ಎನಿಸುತ್ತಿದೆ) 'ಹೋರಾಟ' ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು, ಯಡಿಯೂರಪ್ಪಗೆ ಟಾಂಗ್ ನೀಡುವ ಭರದಲ್ಲಿ ಸಿಎಂ ಹುದ್ದೆ ಖಾಲಿಯಿಲ್ಲ ಎಂಬ ಸಂದೇಶ ರವಾನಿಸಿದ ಸದಾನಂದರ ಹೇಳಿಕೆ ಆ ದೇವರಿಗೇ ಪ್ರೀತಿ.
ಈ ಮಧ್ಯೆ, ಬಹುರ್ಚಿಚಿತ ಜಗದೀಶ ಶೆಟ್ಟರ್ ರನ್ನು ತಮ್ಮ ಮನೆಗೆ ಕರೆಸಿಕೊಂಡಿರುವ ಮಾ.ಮು. ಯಡಿಯೂರಪ್ಪ ಅವರು ಶೆಟ್ಟರರಿಂದ ಆಣೆ-ಪ್ರಮಾಣ ಮಾಡಿಸಿಕೊಂಡಿದ್ದಾರೆ. 'ವಚನಭ್ರಷ್ಟ' ಸದಾನಂದರಿಂದ ಪಾಠ ಕಲಿತಿರುವ ಯಡಿಯೂರಪ್ಪ ಅವರು (ಶೆಟ್ಟರ್) ಮುಖ್ಯಮಂತ್ರಿಯಾಗುತ್ತಿದ್ದಂತೆ ತನ್ನ ಹಿಸಾಕ್ತಿಯನ್ನೇ ಕಾಪಾಡಬೇಕು ಎಂದು ವಚನ ಪಡೆದಿದ್ದಾರೆ ಎನ್ನಲಾಗಿದೆ.
ಮುಖ್ಯಮಂತ್ರಿ ಬದಲಾವಣೆ ವಿವಾರದಲ್ಲಿ ಯಡಿಯೂರಪ್ಪ ತಮ್ಮ ಉಡ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ. ಮತ್ತು ಅದಕ್ಕೆ ಬಿಜೆಪಿ ವರಿಷ್ಠರು ಶರಣಾಗಿದ್ದಾರೆ ಎಂಬ ಸಂದೇಶ ಹೊರಬಿದ್ದಿದ್ದು, ಮುಖ್ಯಮಂತ್ರಿ ಕುರ್ಚಿಯನ್ನು ಪಕ್ಷದಲ್ಲಿ ಹತ್ತಾರು ಬಣಗಳು ತಮ್ಮತ್ತ ಸೆಳೆಯುತ್ತಿವೆ. ಒಟ್ಟಿನಲ್ಲಿ, ವರಿಷ್ಠರನ್ನೂ ಗೊಂದಲದ ಗೂಡಿಗೆ ತಳ್ಳಿ, ಸದ್ಯಕ್ಕೆ ಸಿಎಂ ಬದಲಾವಣೆ ಬೇಡ ಎಂಬ ನಿರ್ಧಾರ ಹೊರಬೀಳುವಂತೆ ನೋಡಿಕೊಳ್ಳುವುದು ಯಡಿಯೂರಪ್ಪ ವಿರೋಧಿ ಬಣದ ತಂತ್ರವಾಗಿದೆ.
ಸೋಮಣ್ಣ ಮತ್ತು ಜಾರಕಿಹೊಳಿ ಕಚ್ಚಾಡುತ್ತಿರುವುದನ್ನು ನೋಡಿದರೆ ಅದೇ ಬೇರೆ ಮಜಲು ಪಡೆದುಕೊಂಡಿದೆ. ತಮ್ಮ ತಮ್ಮ ಬಣಗಳ ನಾಯಕರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಹೇಸಿಗೆ ಮಾಡಿದ್ದಾರೆ.
ಅಂದಹಾಗೆ, ಬಿಜೆಪಿ ಪ್ರಥಮ ಬಾರಿಗೆ ಅಧಿಕಾರಕ್ಕೆ ಬಂದು ನಾಳೆಗೆ (ಜೂನ್ 29) ಸರಿಯಾಗಿ 4 ವರ್ಷ ತುಂಬಲಿದೆ. ಈ ವರ್ಷಾಚರಣೆಯ ದಿನದಂದೇ ಏನಾದರೊಂದು ಫೈಸಲಾಗಿ ಹೋಗಲಿ ಎಂದು ಬಯಸಿರುವ ಸನ್ಮಾನ್ಯ ಸದಾನಂದ ಗೌಡರು ಮಹತ್ತರವಾದ ನಿರ್ಧಾರ ಪ್ರಕಟಿಸುವ ಲಕ್ಷಣಗಳು ಸ್ಪಷ್ಟವಾಗಿವೆ.












Click it and Unblock the Notifications