ಜಗನ್ ಭಯ, ಸೋನಿಯಾ ಅಭಯ ಬೇಡಿದ ಚಿರು

ಜಗನ್ ಭಯದಿಂದ ತತ್ತರಿಸಿರುವ ಚಿರಂಜೀವಿ ಈಗ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆಶ್ರಯ, ಅಭಯ ಬೇಡಿ ದೆಹಲಿಗೆ ತೆರಳಿದ್ದಾರೆ.
ಆಂಧ್ರಪ್ರದೇಶದಲ್ಲಿ ಆಗುತ್ತಿರುವ ಘಟನಾವಳಿಗಳು ರಾಜಕೀಯ ವಿಪ್ಲವದಿಂದ ಪಾರು ಮಾಡಿ ಮೇಡಂ ಎಂದು ಮೊರೆ ಇಟ್ಟಿದ್ದಾರೆ. ಪ್ರಜಾರಾಜ್ಯಂ ಜೊತೆ ಕಾಂಗ್ರೆಸ್ ವಿಲೀನಗೊಂಡ ಮೇಲೆ ಅಂಥಾ ಲಾಭ ಎರಡು ಪಕ್ಷಕ್ಕೂ ಆಗಿಲ್ಲ. ಬದಲಿಗೆ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ತಿರುಪತಿ ಕ್ಷೇತ್ರವನ್ನು ಪಿಆರ್ ಪಿ ಕಳೆದುಕೊಂಡಿದ್ದು ಚಿರಂಜೀವಿಗೆ ಭಾರಿ ಹೊಡೆತ ಕೊಟ್ಟಿತ್ತು.
ತನ್ನ ಕ್ಷೇತ್ರವನ್ನೇ ಕಳೆದುಕೊಂಡ ಚಿರಂಜೀವಿಯಿಂದ ನಮಗೇನು ಲಾಭ ಎಂದು ಹಿರಿಯ ಕಾಂಗ್ರೆಸ್ಸಿಗರು ಕಿಚಾಯಿಸುತ್ತಿದ್ದಾರೆ.
ಆಂಧ್ರಪ್ರದೇಶದಲ್ಲಿ ಉಪ ಚುನಾವಣೆಯಲ್ಲಿ ಜಗನ್ ಅವರ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಗೆಲ್ಲಲು ಅನುಕಂಪದ ಅಲೆ ಕಾರಣ. ವೈಎಸ್ ವಿಜಯಮ್ಮ ಅವರ ಕಣ್ಣೀರು ಕಂಡು ಜನ ಮತ ನೀಡಿದ್ದಾರೆ. ನಮ್ಮ ಪ್ರಯತ್ನ ಎಲ್ಲಾ ವ್ಯರ್ಥವಾಯಿತು. ಆದರೆ, ಜನ ಬೆಂಬಲ ನಮ್ಮ ಕಡೆಗೆ ಇದೆ ಎಂದು ಸೋನಿಯಾಜಿಗೆ ಚಿರಂಜೀವಿ ಹೇಳಿದ್ದಾರೆ.
18 ಅಸೆಂಬ್ಲಿ ಸೀಟುಗಳಲ್ಲಿ ಕೇವಲ 2 ಸೀಟು ಪಡೆದ ಕಾಂಗ್ರೆಸ್ ಈಗ ಪ್ರಜಾರಾಜ್ಯಂ ಜೊತೆ ವಿಲೀನ ಮಾಡಿಕೊಂಡಿದ್ದು ವ್ಯರ್ಥವಾಯಿತೇ ಎಂದು ಯೋಚಿಸತೊಡಗಿದೆ.
ಈ ನಡುವೆ ಆಂಧ್ರಪ್ರದೇಶ ಕಾಂಗ್ರೆಸ್ ನಲ್ಲಿ ಹಲವು ಚಿರಂಜೀವಿ ಪರ ಬ್ಯಾಟಿಂಗ್ ಆರಂಭಿಸಿದ್ದಾರೆ. ಕೃಷ್ಣಾ ಜಿಲ್ಲೆಯ ಶಾಸಕ ಜೋಗಿ ರಮೇಶ್ ಮಾತನಾಡಿ, ಮೆಗಾ ಸ್ಟಾರ್, ರಾಜ್ಯ ಸಭಾ ಸದಸ್ಯ ಚಿರಂಜೀವಿ ಅವರು 2014ರಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಲಿದ್ದಾರೆ. ಈ ಬಗ್ಗೆ ಈಗಾಗಲೇ ಒಪ್ಪಂದವಾಗಿದೆ ಎಂದಿದ್ದಾರೆ.
ಮುಖ್ಯಮಂತ್ರಿಯಾಗಲು ಅರ್ಹತೆಯುಳ್ಳ ಏಕೈಕ ವ್ಯಕ್ತಿ ಎಂದರೆ ಚಿರಂಜೀವಿ, ಕಾಂಗ್ರೆಸ್ ಹೈಕಮಾಂಡ್ ಕೂಡಾ ಚಿರಂಜೀವಿ ಅವರು ಮುಖ್ಯಮಂತ್ರಿಯಾಗಲು ಒಪ್ಪಿಗೆ ನೀಡಲಿದೆ. 2014ರಲ್ಲಿ ಕಾಂಗ್ರೆಸ್ ಹಾಗೂ ಪ್ರಜಾರಾಜ್ಯಂ ಪ್ರಚಂಡ ಬಹುಮತ ಗಳಿಸಬೇಕಾದರೆ ಚಿರಂಜೀವಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲೇಬೇಕು ಎಂದು ರಮೇಶ್ ಹೇಳಿದ್ದಾರೆ.












Click it and Unblock the Notifications