ಕುಣಿಗಲ್ ಶಾಸಕ ಖಂಡಿತ ಅಡ್ಡ ಮತ ಹಾಕಿಲ್ಲ

ಆದರೆ ಇದಕ್ಕೆ ಒಂದು ಅಪವಾದವಿದೆ. ಚುನಾವಣೇ ಆಯೋಗದ ನೀತಿಯನ್ನು ಧಿಕ್ಕರಿಸಿ ಅಡ್ಡಮತ ಹಾಕಿದವರನ್ನು ಕಾಂಗ್ರೆಸ್ ಪತ್ತೆ ಹಚ್ಚಿತಾ? ಎಂದು ಕೇಳಬೇಡಿ. ಆದರೆ, ಕುಣಿಗಲ್ ಶಾಸಕ ಪಿಬಿ ರಾಮಸ್ವಾಮಿ ಗೌಡರು ಅಡ್ಡ ಮತದಾನ ಮಾಡಿಲ್ಲ ಎಂಬುದನ್ನು ಚುನಾವಣೆ ಆಯೋಗದ ಮೇಲಾಣೆಗೂ ಹೇಳಬಹುದು.
ತುಮಕೂರು ಜಿಲ್ಲೆಯ ಈ ಶಾಸಕ ಮಹಾಶಯ ಇಂದಿನ ಕಲುಷಿತ ರಾಜಕೀಯದಲ್ಲಿ ಪಕ್ಷಕ್ಕೆ (ಕಾಂಗ್ರೆಸ್ಸಿಗೆ) ತಾನೆಷ್ಟು ನಿಷ್ಠಾವಂತನಾಗಿರುವೆ ಎಂಬುದನ್ನು ರುಜುವಾತು ಪಡಿಸಿದ್ದಾರೆ. ಅದರೆ ತಮ್ಮ ನೇತಾರರಿಗೆ ಸಾಕ್ಷ್ಯವನ್ನೊದಗಿಸಲು ದುಸ್ಸಾಹಸವನ್ನೇ ಮಾಡಿದ್ದಾರೆ. ಏನಿಲ್ಲ...
ಬ್ಯಾಲೆಟ್ ಪೇಪರ್ ಅನ್ನು ಡಬ್ಬಕ್ಕೆ ಹಾಕುವ ಮುನ್ನ ಸೈಲೆಂಟಾಗಿ ಜೇಬಿನಿಂದ ತಮ್ಮ ಮೊಬೈಲ್ ತೆಗೆದವರೆ ತಾವು ಮತ ಹಾಕಿರುವ ಬ್ಯಾಲೆಟ್ ಪೇಪರಿನ ಫೋಟೋ ತೆಗೆದುಬಿಟ್ಟಿದ್ದಾರೆ. (ಆದರೆ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ).
ಯಾಕ್ಪಪಾ ನಮ್ಮ ರಾಮಸ್ವಾಮಿ ಗೌಡರು ಹೀಗೆ ಮಾಡಿದರು ಅಂತ ಕಾರಣಕ್ಕಾಗಿ ಕೆದಕಿದಾಗ... ಆಪರೇಶನ್ ಕಮಲ ಅವರನ್ನು ಬಹಳಷ್ಟು ಕಾಲದಿಂದ ತೀವ್ರವಾಗಿ ಬಾಧಿಸುತ್ತಿತ್ತು. ರಾಮಸ್ವಾಮಿ ಗೌಡರು ಯಾವುದೇ ಕ್ಷಣ ಬಿಜೆಪಿ ಗಾಳಕ್ಕೆ ಸಿಕ್ಕಿಕೊಳ್ಳುವ ಮೀನು ಎಂಬುದು ಕಾಂಗ್ರೆಸ್ಸಿನ ಬಲವಾದ ಗುಮಾನಿಯಾಗಿತ್ತು. ಜತೆಗೆ, ಚುನಾವಣೆ ದಿನದಂದು ರಾಮಸ್ವಾಮಿ ಗೌಡರು ತಡವಾಗಿ ವಿಧಾನಸೌಧ ಪ್ರವೇಶಿದರು.
ಕಾಂಗ್ರೆಸ್ಸಿಗೆ ಒಂದೊಂದು ಮತವೂ ಅಮೂಲ್ಯವಾಗಿತ್ತು. ಅಂತಹುದರಲ್ಲಿ ಮತದಾನದ ದಿನ ಮಧ್ಯಾಹ್ನ 12.30ರ ವೇಳೆಗೆ 70 ಶಾಸಕರು ಮತ ಚಲಾಯಿಸಿ, ಕೈತೊಳೆದುಕೊಂಡಿದ್ದರು. ಆದರೆ ಒಬ್ಬ ರಾಮಸ್ವಾಮಿ ಗೌಡರು ಮಾತ್ರ 1.30ಕ್ಕೆ ವಿಧಾನಸೌಧದ ಮೆಟ್ಟಿಲೇರಿದ್ದಾರೆ. ಆಗಂತೂ ಕಾಂಗ್ರೆಸ್ ಮಂದಿ ಹುಬ್ಬೇರಿಸಿದ್ದರು. ಎಲ್ಲರೂ ರಾಮಸ್ವಾಮಿ ಗೌಡರತ್ತ ಅಪರಾಧಿ ನೋಟ ಬೀರಿದ್ದರು.
ಸರಿ ಹೇಗಾದರೂ ಮಾಡಿ ಈ ಅಪವಾದ ತೊಡೆದುಕೊಳ್ಳಬೇಕೆಂದು ರಾಮಸ್ವಾಮಿ ಗೌಡರು ನಿರ್ಧರಿಸಿದರು. ಹಾಗಾಗಿ, ಅನ್ಯ ಮಾರ್ಗವಿಲ್ಲದೆ ಅವರು ತಮ್ಮ ನಿಷ್ಠೆಯನ್ನು ಫೋಟೋ ದಾಖಲೆ ಸಮೇತ ಸಾಬೀತುಪಡಿಸಿಬಿಟ್ಟರು. ಅಡ್ಡ ಮತದಾನದಿಂದ (ಸರಡಗಿ ಸೋಲಿನಿಂದ) ಕಂಗೆಟ್ಟಿರುವ ಕಾಂಗ್ರೆಸ್ ಐದು ಸದ್ಯರ ಸಮಿತಿ ರಚಿಸಿ, ಅಡ್ಡಮತದಾನಿಗಳನ್ನು ಪತ್ತೆಹಚ್ಚಿ ಎಂದಿದೆ. ಆದರೆ ರಾಮಸ್ವಾಮಿ ಗೌಡರು ಸದ್ಯ ತಾನು ಬಚಾವಾದೆ ಎಂದು ಒಳಗೊಳಗೇ ನಗುತ್ತಿದ್ದಾರೆ!












Click it and Unblock the Notifications