ಲಂಚಕೋರ ಜಡ್ಜ್ ಬಂಧನ, ಗಾಲಿಗೆ ಬಲವಾದ ಪೆಟ್ಟು

ಪಟ್ಟಾಭಿರಾಮರಾವ್ ಪುತ್ರನ ನಿವಾಸದ ಮೇಲೆ Anti-Corruption Bureau (ACB) ಅಧಿಕಾರಿಗಳು ಶನಿವಾರ(ಜೂ.16) ದಾಳಿ ನಡೆಸಿದರು.
ಬೆಳ್ಳಂಬೆಳಗ್ಗೆ ಆರಂಭವಾದ ದಾಳಿ ಸಂಜೆ ನಾಲ್ಕು ಗಂಟೆ ವೇಳೆಗೆ ಮುಕ್ತಾಯ ಹಂತ ತಲುಪಿದೆ. ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ನಿವೃತ್ತ ನ್ಯಾಯಮೂರ್ತಿ ಚಲಪತಿರಾವ್ ಅವರ ಅಶೋಕನಗರದ ನಿವಾಸಕ್ಕೂ ತೆರಳಿ ಶೋಧ ಆರಂಭಿಸಿದರು.
ನ್ಯಾಯಮೂರ್ತಿ ಪಟ್ಟಾಭಿರಾಮರಾವ್ ಪುತ್ರ ರವಿಚಂದ್ರ ಅವರ ನಿವಾಸಕ್ಕೆ ದಾಳಿಯಿಟ್ಟ ಅಧಿಕಾರಿಗಳು ಅಲ್ಲಿಯೂ ಶೋಧ ಕಾರ್ಯ ಕೈಗೊಂಡರು. ರವಿಚಂದ್ರ ಅವರನ್ನು ವಶಕ್ಕೆ ತೆಗೆದುಕೊಂಡು ಅವರ ಬ್ಯಾಂಕ್ ಲಾಕರ್ ಸಹ ಪರಿಶೀಲನೆ ನಡೆಸಲಾಯಿತು.
ರೆಡ್ಡಿ ಬೇಲ್ ಗೆ ಡೀಲ್ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇನ್ನೂ ಅನೇಕ ಕಡೆ ದಾಳಿಗಳಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ರೆಡ್ಡಿಗೆ ಬೇಲ್ ನೀಡಲು ನ್ಯಾಯಮೂರ್ತಿ ಪಟ್ಟಾಭಿರಾಮರಾವ್ ಲಂಚ ಸ್ವೀಕರಿಸಿದ್ದರು, ಇದಕ್ಕೆ ನಿವೃತ್ತ ನ್ಯಾಯಮೂರ್ತಿ ಸೇರಿದಂತೆ ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿತ್ತು.
ಬಳ್ಳಾರಿಗೆ ಎಸಿಬಿ: ಆಂಧ್ರಪ್ರದೇಶದ ಸಚಿವ ಎರಸು ಪ್ರತಾಪ ರೆಡ್ಡಿ, ರೌಡಿ ಶೀಟರ್ ಯಾದಗಿರಿ ರಾವ್ ಮೂಲಕ ಪಟ್ಟಾಭಿರಾಮರಾವ್ ಅವರ ಪುತ್ರನನ್ನು ಸಂಪರ್ಕಿಸಿದ್ದ ಸೋಮಶೇಖರ ರೆಡ್ಡಿ ಸರಿಯಾಗಿ ಡೀಲ್ ಮಾಡಿದ್ದರು ಎನ್ನಲಾಗಿತ್ತು.
ರವಿಚಂದ್ರ ಅವರ ಬ್ಯಾಂಕ್ ಖಾತೆಗಳ ವಿವರ ಹೊರಬಿದ್ದ ಮೇಲೆ ಸೋಮಶೇಖರ ರೆಡ್ಡಿ ಸೇರಿದಂತೆ ರೆಡ್ಡಿ ಆಪ್ತರ ಮೇಲೂ ಎಸಿಬಿ ತಂಡ ಮುಗಿಬಿದ್ದಿದೆ.
ಎಲ್ಲೆಲ್ಲಿ ದಾಳಿ: ಬಂಜಾರ ಹಿಲ್ಸ್ ನಲ್ಲಿರುವ ಜಡ್ಜ್ ಕ್ವಾಟರ್ಸ್ ನ ಪಟ್ಟಾಭಿರಾಮರಾವ್ ಅಪಾರ್ಟ್ಮೆಂಟ್, ಅಶೋಕ ನಗರದಲ್ಲಿರುವ ಚಲಪತಿರಾವ್ ಅವರ ಮನೆ, ಗುಂಟೂರು ಜಿಲ್ಲೆಯ ಚಿಲಕಲುರಿಪೇಟ್ ನಲ್ಲಿರುವ ಚಲಪತಿ ಸೋದರ ಶ್ರೀನಿವಾಸರಾವ್ ಮನೆ,
ಎಸಿಬಿ ತಂಡ ಸಕಲ ಸಿದ್ಧತೆಯೊಂದಿಗೆ ಬಳ್ಳಾರಿ ಕಡೆಗೆ ಹೊರಟಿದೆ. ಜನಾರ್ದನ ರೆಡ್ಡಿ, ಸೋಮಶೇಖರ ರೆಡ್ಡಿ ಮನೆ ಮೇಲೆ ಸಂಭಾವ್ಯ ದಾಳಿ ನಡೆಯುವುದರಿಂದ ಬಳ್ಳಾರಿಯಲ್ಲಿ ರೆಡ್ಡಿ ಆಪ್ತರಿಗೆ ಆತಂಕ ಶುರುವಾಗಿದೆ.
ರೆಡ್ಡಿಗೆ ಸವಾಲಿಗೆ ಇದು ಎಸಿಬಿ ಉತ್ತರವೇ?: ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ರವಿಚಂದ್ರ ಆಗಲಿ, ಯಾದಗಿರಿಯಾಗಲಿ ಯಾರೊಂದಿಗೂ ನಾನು ಮಾತನಾಡಿಲ್ಲ. ನಾನು ಮಾತನಾಡಿದ್ದಕ್ಕೆ ಸಾಕ್ಷಿ ಇದ್ದರೆ ತೋರಿಸಿ, ತಕ್ಷಣವೇ ನಾನು ರಾಜಕೀಯದಿಂದ ನಿವೃತ್ತಿ ಹೊಂದಿ, ಮನೆಯಲ್ಲೇ ಸಂಪೂರ್ಣವಾಗಿ ಕಾಲಕಳೆಯುತ್ತೇನೆ ಎಂದು ಜನಾರ್ದನ ರೆಡ್ಡಿ ಅವರ ತಮ್ಮ ಕೆಎಂಎಫ್ ಮುಖ್ಯಸ್ಥ ಸೋಮಶೇಖರ ರೆಡ್ಡಿ ಅವರು ಸವಾಲೆಸೆದಿದ್ದರು.
ಸಿಬಿಐ, ಎಸಿಬಿ ಹಾಗೂ ಪೊಲೀಸರ ನಡುವಿನ ಸಂವಹನ ಕೊರತೆಯಿಂದ ಗಾಲಿ ಜನಾರ್ದನ ರೆಡ್ಡಿ ಲಂಚ ಪ್ರಕರಣ ಇನ್ನಷ್ಟು ವಿಳಂಬವಾಗುವ ಶಂಕೆ ವ್ಯಕ್ತವಾಗಿತ್ತು. ಅಲ್ಲದೆ, ಆಂಧ್ರಪ್ರದೇಶವನ್ನು ಕಾಡುತ್ತಿರುವ ನಕಲಿ ಮದ್ಯ ಪ್ರಕರಣವನ್ನು ಮುಕ್ತಾಯಗೊಳಿಸುವ ಒತ್ತಡದಲ್ಲಿದ್ದ ಎಸಿಬಿ ತಂಡ ಇದ್ದಕ್ಕಿದ್ದಂತೆ ಗಾಲಿ ರೆಡ್ಡಿ ಪ್ರಕರಣದಲ್ಲಿ ದಾಳಿ ನಡೆಸಿರುವುದು ರೆಡ್ಡಿ ಪಾಳೆಯಕ್ಕೆ ಆತಂಕ ಮೂಡಿಸಿದೆ.












Click it and Unblock the Notifications