ಪ್ಯಾರೀಸ್ ಆವೆಮಣ್ಣಿನಲ್ಲಿ ಮದಗಜಗಳ ಗುದ್ದಾಟ

ರೋಲ್ಯಾಂಡ್ ಗ್ಯಾರೋಸ್ ನ ಆವೆಮಣ್ಣಿನ ಅಂಕಣದಲ್ಲಿ ನಡೆಯುವ ಈ ಮದಗಜಗಳ ಕಾಳಗ ಕೋಟಿಗಟ್ಟಲೇ ವೀಕ್ಷಕರನ್ನು ತಲುಪಲಿದೆ. ಟೆನಿಸ್ ಜಗತ್ತು ಅತ್ಯಂತ ಕುತೂಹಲದಿಂದ ಎದುರು ನೋಡುತ್ತಿರುವ ಈ ಪಂದ್ಯ ನಿಯೋ ಸ್ಫೋರ್ಟ್ ನಲ್ಲಿ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.
ಈ ಇಬ್ಬರು ಆಟಗಾರರು ಪರಸ್ಪರ ಮೂರು ಬಾರಿ ಗ್ರ್ಯಾಂಡ್ ಸ್ಲಾಮ್ ಫೈನಲ್ ನಲ್ಲಿ ಎದುರಾಗಿದ್ದು, ಈಗ ನಾಲ್ಕನೇ ಬಾರಿಗೆ ಪ್ರಶಸ್ತಿಗಾಗಿ ಕಾದಾಡಲಿದ್ದಾರೆ.
6 ಬಾರಿ ಫ್ರೆಂಚ್ ಓಪನ್ ಗೆದ್ದು ಶ್ರೇಷ್ಠ ಆಟಗಾರ ಬೋರ್ಗ್ ದಾಖಲೆ ಸರಿಗಟ್ಟಿರುವ ರಾಫೆಲ್ ಈ ಸಲ ಗೆದ್ದು 7 ನೇ ಬಾರಿ ಫ್ರೆಂಚ್ ಓಪನ್ ಚಾಂಪಿಯನ್ ಆಗುವ ಕನಸು ಹೊತ್ತಿದ್ದಾರೆ.
ಜೋಕೋವಿಕ್ ಏನಾದರೂ ಗೆದ್ದರೆ ಕಳೆದ 43 ವರ್ಷಗಳಲ್ಲಿ ನಂತರ ಮೊದಲ ಬಾರಿಗೆ ಎಲ್ಲಾ ನಾಲ್ಕು ಗ್ರಾಂಡ್ ಸ್ಲಾಂ ಪ್ರಶಸ್ತಿಗಳನ್ನು ಗೆದ್ದ ದಾಖಲೆ ಮೆರೆಯಲಿದ್ದಾರೆ. ಈ ರೀತಿ ಸಾಧನೆಯನ್ನು ನಡಾಲ್ ಆಗಲಿ, ಫೆಡರರ್ ಆಗಲಿ ಮಾಡಿಲ್ಲ ಎಂಬುದು ವಿಶೇಷ.
ಫೈನಲ್ ಹಾದಿ: ಅಗ್ರ ಶ್ರೇಯಾಂಕ ಜೋಕೋವಿಕ್ 6-4, 7-5, 6-3 ನೇರ ಸೆಟ್ ಗಳಲ್ಲಿ ಮೂರನೇ ಸೀಡ್ ನ ರೋಜರ್ ಫೆಡರರ್ ಅನ್ನು ಸುಲಭವಾಗಿ ಸೋಲಿಸಿದರು. ರಾಫೆಲ್ ನಡಾಲ್ 6-2, 6-2, 6-1 ರಲ್ಲಿ ಆರನೇ ಶ್ರೇಯಾಂಕದ ಫೆರೆರರ್ ಅವರನ್ನು ಸೋಲಿಸಿ ಫೈನಲ್ ತಲುಪಿದ್ದಾರೆ.
ಮರಿಯಾ ಶರಪೋವಾ ವಿಕ್ರಮ: ರಷ್ಯಾದ ಕೆಂಚು ಕೂದಲಿನ ಬೆಡಗಿ ಮರಿಯಾ ಶೆರಪೋವಾ ಅವರು ಮೊದಲ ಬಾರಿಗೆ ಫ್ರೆಂಚ್ ಫೈನಲ್ ತಲುಪಿದ್ದ ಇಟಲಿಯಾ ಸಾರಾ ಎರಾನಿ ವಿರುದ್ಧ 6-3,6-2ರ ನೇರ ಸೆಟ್ ಗಳ ವಿಜಯ ದಾಖಲಿಸಿದರು.
ಪ್ರಥಮ ಬಾರಿಗೆ ಫ್ರೆಂಚ್ ಓಪನ್ ಗೆದ್ದ ಶರಪೋವಾ, ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲಾಮ್(ಆಸ್ಟ್ರೇಲಿಯಾ(21ವರ್ಷವಿದ್ದಾಗ), ಯುಎಸ್(19 ವರ್ಷ),ವಿಂಬಲ್ಡನ್(17ವರ್ಷ), ಫ್ರೆಂಚ್ ಓಪನ್(25 ವರ್ಷ)) ಗೆದ್ದ ಸಾಧನೆ ಮೆರೆದರು. ಈ ಸಾಧನೆ ಮಾಡಿದ ವಿಶ್ವದ 10ನೇ ಆಟಗಾರ್ತಿ ಎನಿಸಿದರು.
2008ರಲ್ಲಿ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಶರಪೋವಾ ಮತ್ತೊಮ್ಮೆ ಟೆನಿಸ್ ಅಂಗಳಕ್ಕೆ ಇಳಿಯುವುದೇ ಅನುಮಾನ ಎಂದು ಎಲ್ಲರೂ ಭಾವಿಸಿದ್ದರು. ಆದರೆ,ಕಳೆದ ನಾಲ್ಕು ವರ್ಷಗಳಲ್ಲಿ ಕಠಿಣ ಅಭ್ಯಾಸ ಹಾಗೂ ಆತ್ಮವಿಶ್ವಾಸದ ಮೂಲಕ ಸಾಧನೆ ಮೆರೆದಿರುವ ಮರಿಯಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಎಲ್ಲಾ ಗ್ರ್ಯಾಂಡ್ ಸ್ಲಾಮ್ ಗೆದ್ದ 10 ಆಟಗಾರ್ತಿಯರಾದ ಮೌರೀನ್ ಕೊನ್ನೋಲಿ ಬ್ರಿಂಕರ್, ಡೊರಿಸ್ ಹ್ಯಾರ್ಟ್, ಶರ್ಲಿ ಫ್ರೈ ಇರ್ವಿನ್, ಮಾರ್ಗರೆಟ್ ಕೊರ್ಟ್, ಬಿಲ್ಲಿ ಜೀನ್ ಕಿಂಗ್, ಕ್ರಿಸ್ ಎವರ್ಟ್, ಮಾರ್ಟಿನಾ ನವಾಟ್ರಿಲೋವಾ, ಸ್ಟೆಫಿ ಗ್ರಾಫ್, ಸೆರೆನಾ ವಿಲಿಯಮ್ಸ್ ಸಾಲಿಗೆ ಮರಿಯಾ ಶರಪೋವಾ ಸೇರ್ಪಡೆಗೊಂಡಿದ್ದಾರೆ.












Click it and Unblock the Notifications