ನಿತ್ಯಾ ಆಶ್ರಮ ಸರಕಾರದ ಸುಪರ್ದಿಗೆ : ಸುರೇಶ್

Karnataka govt mulling to take over Nithyananda ashram
ಬೆಂಗಳೂರು, ಜೂ. 9 : ನಿತ್ಯಾನಂದನ ಬಿಡದಿ ಆಶ್ರಮದಲ್ಲಿ ನಡೆಯುತ್ತಿರುವ ಆಕ್ಷೇಪಾರ್ಹ ಚಟುವಟಿಕೆಗಳು, ಪತ್ರಕರ್ತರ ಮೇಲೆ ನಡೆದ ದಬ್ಬಾಳಿಕೆ, ನಿತ್ಯಾನಂದ ಶಿಷ್ಯಂದಿರ ಗೂಂಡಾಗಿರಿ, ನಿತ್ಯಾನಂದನ ವಿರುದ್ಧ ಇಡೀ ಕರ್ನಾಟಕದಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಸರಕಾರ ಬಿಡದಿಯ ಧ್ಯಾನಪೀಠಂ ಆಶ್ರಮವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಚಿಂತಿಸುತ್ತಿದೆ.

"ಸ್ವಾಮಿ ನಿತ್ಯಾನಂದನ ಬಿಡದಿ ಆಶ್ರಮದ ಆಡಳಿತವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಸರಕಾರ ಚಿಂತಿಸುತ್ತಿದೆ" ಎಂದು ನಗರಾಭಿವೃದ್ಧಿ ಮತ್ತು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಅವರು ಶನಿವಾರ ಧಾರವಾಡದಲ್ಲಿ ಮಾಧ್ಯಮದವರಿಗೆ ತಿಳಿಸಿದ್ದಾರೆ. ರಾಮನಗರ ಜಿಲ್ಲೆಯಲ್ಲಿರುವ ಆಶ್ರಮಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಕೂಡ ಸರಕಾರ ಚಿಂತಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನ ಆಶ್ರಮದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರು ಮತ್ತು ಆಶ್ರಮದ ಸನ್ಯಾಸಿಗಳ ನಡುವೆ ಭಾರೀ ಹೊಡೆದಾಟ ನಡೆದು ಅನೇಕರು ಗಾಯಗೊಂಡಿದ್ದರು. ಈ ಗಲಭೆಯ ನಂತರ ರಾಮನಗರ ಎಸ್ ಪಿ ಅಗರವಾಲ್ ಅವರು ಎರಡೂ ತಂಡಗಳ 50ಕ್ಕೂ ಹೆಚ್ಚು ಗಲಭೆಕೋರರನ್ನು ಬಂಧಿಸಿದ್ದರು. ಅವರಲ್ಲಿ ಕೆಲವರಿಗೆ ಜಾಮೀನು ದೊರೆತಿದೆ.

ಈ ಗಲಭೆಗೆ ಕಾರಣವಾಗಿದ್ದು, ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಟಿವಿ ಚಾನಲ್ಲಿನ ಪತ್ರಕರ್ತರು ನಿತ್ಯಾನಂದನ ವಿರುದ್ಧ ಹೂಡಲಾಗಿದ್ದ ಕೇಸಿಗೆ ಸಂಬಂಧಿಸಿದ ಸಮನ್ಸ್ ಅನ್ನು ನಿತ್ಯಾನಂದನ ಮುಂದೆ ತಂದು ಹಿಡಿದಿದ್ದರು. ಇದನ್ನು ಸ್ವೀಕರಿಸಲು ನಿರಾಕರಿಸಿದ್ದ ನಿತ್ಯಾನಂದ ಪತ್ರಕರ್ತನನ್ನು ಪತ್ರಿಕಾಗೋಷ್ಠಿಯಿಂದ ಹೊರಹಾಕಿದ್ದ. ಇದರ ವಿರುದ್ಧ ರಾಜ್ಯಾದ್ಯಂತ ಭಾರೀ ಪ್ರತಿಭಟನೆಗಳು ನಡೆದು, ಕನ್ನಡ ವಿರೋಧಿ ನಿತ್ಯಾನಂದನನ್ನು ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಕೂಗೆದ್ದಿತ್ತು.

ನಿಡುಮಾಮಿಡಿ ಶ್ರೀ ಕಿಡಿ : ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿಗಳು ಕೂಡ ನಿತ್ಯಾನಂದ ಸ್ವಾಮಿ ಮತ್ತು ಆತನ ಆಶ್ರಮದಲ್ಲಿ ನಡೆಯುತ್ತಿರುವ ಆಕ್ಷೇಪಾರ್ಹ ಚಟುವಟಿಕೆಗಳ ಬಗ್ಗೆ ಕೆಂಡ ಕಾರಿದ್ದಾರೆ. ಆತ ಕರ್ನಾಟಕಕ್ಕೆ ಅಂಟಿದ ಕಳಂಕ. ಆತನನ್ನು ಒಂದು ಕ್ಷಣವೂ ಕರ್ನಾಟಕದಲ್ಲಿ ಇರಲು ಬಿಡಬಾರದು. ಕೂಡಲೆ ಆತನನ್ನು ರಾಜ್ಯದಿಂದ ಹೊರದಬ್ಬಬೇಕು ಎಂದು ನಿಡುಮಾಮಿಡಿ ಶ್ರೀಗಳು ಶಿವಮೊಗ್ಗದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಮಧುರೈನಿಂದ ನಿತ್ಯಾನಂದನ ಸಂದೇಶ : ಆಶ್ರಮದಲ್ಲಿ ನಡೆದ ಗಲಭೆಯ ನಂತರ ರಾಮನಗರ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ, ವಿಚಾರಣೆಗೆ ಕೂಡ ಸಿಗದೆ ಪರಾರಿಯಾಗಿದ್ದ ನಿತ್ಯಾನಂದ ತನ್ನ ವೆಬ್‌ಸೈಟ್ ಮುಖಾಂತರ ಸಂದೇಶ ರವಾನಿಸಿದ್ದಾರೆ. ಆತ ಎಲ್ಲೂ ಇಲ್ಲ ರಾಮನಗರದ ಬಳಿಯ ರೆಸಾರ್ಟಿನಲ್ಲಿಯೇ ಇದ್ದಾರೆ. ಬಂಧನ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ತಯಾರಿ ನಡೆಸಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಈಗ ಎಲ್ಲ ಗಾಳಿಸುದ್ದಿಗಳಿಗೆ ನಿತ್ಯಾನಂದ ಪೂರ್ಣವಿರಾಮ ಹೇಳಿದ್ದಾರೆ.

"ನಾನೇನು ಪರಾರಿಯಾಗಿಲ್ಲ. ನಾನು ಮಧುರೈನ ಅಧೀನಂ ಪೀಠದಲ್ಲಿಯೇ ಇದ್ದೇನೆ. ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡುವುದರಿಂದ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನನಗೆ ದೇವರು, ಕಾನೂನು ಮತ್ತು ಕರ್ನಾಟಕದ ಜನರ ಮೇಲೆ ನಂಬಿಕೆಯಿದೆ. ಕರ್ನಾಟಕದ ಜನ ನನ್ನನ್ನು ವಿರೋಧಿಸುವುದಿಲ್ಲ, ದ್ವೇಷಿಸುವುದೂ ಇಲ್ಲ. ಕೆಲ ಸಮಾಜ ವಿರೋಧಿ ಶಕ್ತಿಗಳು ಜನರನ್ನು ರೊಚ್ಚಿಗೆಬ್ಬಿಸುತ್ತಿವೆ. ಅವರನ್ನೆಲ್ಲ ಕಾನೂನಿನ ಮುಖಾಂತರ ಮೆಟ್ಟಿ ನಿಲ್ಲುತ್ತೇನೆ" ಎಂದು ನಿತ್ಯಾನಂದ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+