ಕಾಂಗ್ರೆಸ್ಸಿಗೆ ನನ್ನ ಮೇಲೆ ವಿಶ್ವಾಸವಿಲ್ಲ: ಸಿದ್ದರಾಮಯ್ಯ

ಶುಕ್ರವಾರ ಸಿದ್ದರಾಮಯ್ಯ ನಡೆಸುತ್ತಿರುವ ಸುದ್ದಿಗೋಷ್ಠಿಯ ವಿವರ:
ರಾಜ್ಯ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷವಾಗಿರುವ ಕಾಂಗ್ರೆಸ್ಸಿಗೆ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ ಅತ್ಯಂತ ಮಹತ್ವದ್ದು. ಆ ಸ್ಥಾನದ ಜವಾಬ್ದಾರಿ ಹೊತ್ತಿರುವನು ನಾನು. ಆದರೆ ಚುನಾವಣೆ ನಿಮಿತ್ತ ನನ್ನನ್ನು ಸಂಪರ್ಕಿಸಲೇ ಇಲ್ಲ. ಆ ಖುರ್ಚಿಯ ಗೌರವವನ್ನು ಕಾಪಾಡಲೇ ಇಲ್ಲ. ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅವರವೇ ಅಭ್ಯರ್ಥಿಗಳ ಆಯ್ಕೆ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ನನ್ನ ಜತೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಮಾತುಕತೆಯೇ ನಡೆಸಿಲ್ಲ. ಇದು ನನ್ನನ್ನು ತೀವ್ರವಾಗಿ ಭಾದಿಸಿದೆ. ಆದ್ದರಿಂದ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇನೆ.
ನನ್ನ ಬೆಂಬಲಿಗರಾದ ಇಬ್ರಾಹಿಂ ಅವರಿಗೆ ಟಿಕೆಟ್ ಕೇಳಿದ್ದು ನಿಜ. ಆದರೆ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದರಿಂದ ಬೇಜಾರಾಗಿದೆ. ಮೊನ್ನೆ ರಾಜ್ಯಸಭೆಗೆ ಚುನಾವಣೆ ನಡೆದಾಗಲೇ ನನ್ನ ಕೆಲವೊಂದು ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಎಂದು ಕೇಳಿದ್ದೆ. ಆದರೆ ನನ್ನ ಬೇಡಿಕೆಗೆ ಕಾಂಗ್ರೆಸ್ ಸೊಪ್ಪು ಹಾಕಲಿಲ್ಲ. ಆಗಲೂ ನನಗೆ ಅಪಮಾನವಾಯಿತು.
ಸ್ವಾಭಿಮಾನಕ್ಕೆ ಧಕ್ಕೆ ಬರಬಾರದು. ಆ ರೀತಿ ಆದಾಗ ಅಲ್ಲಿರಬಾರದು...ಅದಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ಸಿಗೆ ನನ್ನ ಮೇಲೆ ವಿಶ್ವಾವಿದ್ದು, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿದ್ದು, ಪ್ರತಿಪಕ್ಷ ನಾಯಕನ ಸ್ಥಾನದ ಮೇಲೆ ವಿಶ್ವಾಸ, ಗೌರವ ಇದೆ ಎಂಬುದನ್ನು ಸಾಬೀತುಪಡಿಸುವುದು ಅಗತ್ಯವಾಗಿದೆ. ಈಗ ಚೆಂಡು ಕಾಂಗ್ರೆಸ್ ಅಂಗಳದಲ್ಲಿದೆ. ಅವರಿಗೆ ನನ್ನ ಮೇಲೆ ವಿಶ್ವಾವಿದೆ ಎಂಬುದು ಸಾಬೀತಾದರೆ ರಾಜೀನಾಮೆ ವಾಪಸು ತೆಗೆದುಕೊಳ್ಳುವ ಬಗ್ಗೆ ವಿಚಾರ ಮಾಡುತ್ತೇನೆ.
ನನ್ನ ಕಡೆಯಿಂದ ಯಾವುದೇ ಬಂಡಾಯ ಅಭ್ಯರ್ಥಿಯನ್ನು ನಿಲ್ಲಿಸುವುದಿಲ್ಲ. ಕಾಂಗ್ರಸ್ಸಿನ ಸಾಮಾನ್ಯ ಶಾಸಕನಾಗಿ ಮೇಲ್ಮನೆ ಚುನಾವಣೆ ಮತದಾನದಲ್ಲಿ ಭಾಗವಹಿಸುವೆ. ಮತ್ತು ಕಾಂಗ್ರೆಸ್ ಅಭ್ಯರ್ಥಿಗೇ ಮತ ಹಾಕುವೆ. ಆದರೆ ಸದ್ಯದ ಬಿಕ್ಕಟ್ಟು ಇತ್ಯರ್ಥವಾಗುವವರೆಗೂ ನಾನು ಪ್ರತಿಪಕ್ಷ ನಾಯಕನ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ.












Click it and Unblock the Notifications