ಅವಿವಾಹಿತರಿಗೆ ತಮಿಳುನಾಡು ಸರಕಾರದ ಭರ್ಜರಿ ಆಫರ್

ಇದೇ ಬರುವ ಜೂನ್ 1ರಿಂದ ಅನ್ವಯವಾಗುವಂತೆ ಮೂರು ದಿನಗಳಲ್ಲಿ 11 ದೇವಾಲಯಗಳ ದರ್ಶನ ಮಾಡಿಸುವ ವ್ಯವಸ್ಥೆಯನ್ನು ತಮಿಳುನಾಡು ಪ್ರವಾಸೋದ್ಯಮ ಇಲಾಖೆ ಆಯೋಜಿಸಿದೆ. ಅಲ್ಲದೆ ಪ್ರವಾಸಿಗರ ಹೆಸರಿನಲ್ಲಿ ಲಕ್ಷಾರ್ಚನೆ, ಕುಂಕುಮಾರ್ಚನೆ, ವಿಶೇಷ ಪೂಜೆ ಕೂಡಾ ಇಲಾಖೆ ಆಯೋಜಿಸುತ್ತದೆ. ಆಸ್ತಿಕರು ಕಂಕಣ ಭಾಗ್ಯ, ಸಂತಾನಪ್ರಾಪ್ತಿಗಾಗಿ ಈ ದೇವಾಲಯಗಳ ದರ್ಶನ ಮಾಡುವುದು ವಾಡಿಕೆ.
ಈ ಪ್ರವಾಸ ಮತ್ತು ವಿಶೇಷ ಪೂಜೆ, ಪುನಸ್ಕಾರಗಳಲ್ಲಿ ಅವಿವಾಹಿತರು ಭಾಗವಹಿಸಬೇಕು. ಈಗಾಗಲೇ ಇಲಾಖೆ ಸಂಬಂಧಪಟ್ಟ ದೇವಾಲಯಗಳಲ್ಲಿ ಮಾತುಕತೆ ನಡೆಸಿದ್ದು ಸಕಲ ಸಿದ್ದತೆಗಳನ್ನು ನಡೆಸಿದೆ.
ಈ ಮೂರು ದಿನಗಳ ಪ್ರವಾಸ ಮುಡಿಚೂರು ದೇವಾಲಯದಿಂದ ಆರಂಭವಾಗಿ ತಿರುಮನ್ಮೇರಿ, ತಿರುವೀಳಮಚಾಲೆ, ನಲ್ಲೂರು, ನಾಥಚೆರ್, ಉಪ್ಪಲಿಯಪ್ಪನ್, ಮಧುರೈ ಮೀನಾಕ್ಷಿ ಸುಂದರೇಶ್ವರ, ತಿರುವೆಂಗಾದಂ, ತಿರುಚೇರಿ, ತಿರುಕರುಕಾವೂರ್ ದೇವಾಲಯದಲ್ಲಿ ಮುಕ್ತಾಯಗೊಳ್ಳಲಿದೆ.
ಪ್ರತಿ ಶುಕ್ರವಾರ ಸಂಜೆ ಹೊರಟು ದೇವಾಲಯಗಳ ದರ್ಶನ ಮಾಡಿಕೊಂಡು ಸೋಮವಾರ ಮುಂಜಾನೆ ಹೊರಟ ಸ್ಥಳಕ್ಕೆ ವಾಪಾಸ್ ಬಿಡಲಾಗುವುದು ಮತ್ತು ಈ ಪ್ಯಾಕೇಜ್ ಟೂರ್ ವೆಚ್ಚ 2600 ರೂಪಾಯಿ ಎಂದು ತಮಿಳುನಾಡು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ಈ ಮೇಲಿನ ಎಲ್ಲಾ ದೇವಾಲಯಗಳು ಶಿವ ಅಥವಾ ವಿಷ್ಣುವಿನ ದೇವಾಲಯಗಳಾಗಿದ್ದು ವಿವಾಹ ದೋಷಕ್ಕೆ ಸಂಬಂಧಿಸಿದಂತೆ ವಿಶೇಷ ಪೂಜೆ ನಡೆಸಲಾಗುತ್ತದೆ. ಎರಡು ಮೂರು ಬಾರಿ ಜಯಲಲಿತಾ ತಮಿಳುನಾಡು ಮುಖ್ಯಮಂತ್ರಿಯಾಗಿದ್ದರೂ ಈ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡಿ ತನ್ನ ವಿವಾಹದೋಷಕ್ಕೆ ಪರಿಹಾರಕ್ಕೆ ಯಾಕೆ ಮುಂದಾಗಿಲ್ಲ ಎಂದು ನಾಸ್ತಿಕರ ಪ್ರಶ್ತ್ನೆಗೆ ನಮ್ಮಲ್ಲಿ ಉತ್ತರವಿಲ್ಲ.












Click it and Unblock the Notifications