ಯಡಿಯೂರಪ್ಪ ಪಕ್ಷ ತೊರೆಯುವುದು ಗ್ಯಾರಂಟಿ

ಸದಾನಂದ ಗೌಡರು ನಡೆದುಕೊಂಡ ರೀತಿ, ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ನೀಡಿರುವ ಅನುದಾನ, ಅಧಿಕಾರಿಗಳ ವರ್ಗಾವರ್ಗಿ ಬೇಸರ ಬಂದಿದೆ. ಯಡಿಯೂರಪ್ಪ ಅವರ ಬೆಂಬಲಿಗರನ್ನು ಬೇಕಂತಲೇ ದೂರ ಇರಿಸಿ ಅಪಮಾನ ಮಾಡಲಾಗಿದೆ. ಈಗಲೂ ಕೂಡಾ ಹೈಕಮಾಂಡ್ ನಮ್ಮ ನಾಯಕರ ಬಗ್ಗೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಶಾಸಕ ಬಿಪಿ ಹರೀಶ್ ಹೇಳಿದ್ದಾರೆ..
ದ್ವಂದ್ವ ಹೇಳಿಕೆ ನೀಡುವ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರನ್ನು ಶಾಸಕರು ನಂಬುವಂತಿಲ್ಲ. ಬಿಜೆಪಿ ಹಿರಿಯ ನಾಯಕರಿಗೆ ಯಾರೂ ಮರ್ಯಾದೆ ಕೊಡುತ್ತಿಲ್ಲ. ಮರ್ಯಾದೆ ಇಲ್ಲದ ಜಾಗದಲ್ಲಿ ಕ್ಷಣ ಕಾಲ ಇರುವುದು ಸರಿಯಿಲ್ಲ. ಯಡಿಯೂರಪ್ಪ ಅವರು ಪಕ್ಷ ತೊರೆದರೆ, ಡಿವಿ ಸದಾನಂದ ಗೌಡರ ಸರ್ಕಾರ ಪತನವಾಗುವುದು ಗ್ಯಾರಂಟಿ ಎಂದು ಹರೀಶ್ ತಿಳಿಸಿದರು.
ಪಕ್ಷ ಉಳಿಯಬೇಕಾದರೆ...: ವೇದ ಸುಳ್ಳಾದರೂ ಗಾದೆ ಸುಳ್ಳಾಗದು, ನಗೋ ಹೆಂಗಸರನ್ನು, ಅಳೋ ಗಂಡಸರನ್ನು ನಂಬಬಾರದು ಎಂಬ ಮಾತಿದೆ. ಈಗ ನಗೋ ಗಂಡಸರನ್ನು ನಂಬಬಾರದು ಎಂಬದನ್ನು ಡಿವಿ ಸದಾನಂದ ಗೌಡರು ಸಾಬೀತುಪಡಿಸಿದ್ದಾರೆ.
ವಿಶ್ವಾಸ ಘಾತುಕತನ ಮೆರೆದ ಸದಾನಂದಗೌಡರು, ನಮ್ಮ ಮಹಾನ್ ನಾಯಕ ಯಡಿಯೂರಪ್ಪ ಅವರಿಗೆ ಮಾಡಿದ ದ್ರೋಹ ತಡೆದುಕೊಳ್ಳಲು ಸಾಧ್ಯವಿಲ್ಲ. ಪಕ್ಷ ಉಳಿಯಬೇಕಾದರೆ ಸದಾನಂದ ಗೌಡರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ, ಇಲ್ಲದಿದ್ದರೆ ಯಡಿಯೂರಪ್ಪ ಅವರ ಜೊತೆಗೆ ಪಕ್ಷ ಕೂಡಾ ನುಚ್ಚುನೂರಾಗಲಿದೆ ಎಂದು ಶಾಸಕ ಬಿಪಿ ಹರೀಶ್ ಹೇಳಿದ್ದಾರೆ.
ಯಡಿಯೂರಪ್ಪ ಅವರು ತಮ್ಮ ಅಂತಿಮ ನಿರ್ಧಾರವನ್ನು ಸೋಮವಾರ ಸಂಜೆ ಪ್ರಕಟಿಸಲಿದ್ದಾರೆ. ಈ ನಡುವೆ ಯಡಿಯೂರಪ್ಪ ಅವರ ಪರ ಶೋಭಾ ಕರಂದ್ಲಾಜೆ ಹಾಗೂ ಸುರೇಶ್ ಅಂಗಡಿ ಅವರು ಹೈಕಮಾಂಡ್ ಜೊತೆ ಚರ್ಚೆ ನಡೆಸುತ್ತಿದ್ದಾರೆ.












Click it and Unblock the Notifications