ರೌಡಿ ಟೂರಿಸ್ಟುಗಳಿಂದ ದಾಂಡೇಲಿ ಅರಣ್ಯ ಅಧಿಕಾರಿ ಹತ್ಯೆ

ದಾಂಡೇಲಿಯ ಕಾಳಿ ನದಿ ತಟದಲ್ಲಿ ಮೊಸಳಗೆ ಆಹಾರ ಹಾಕುವ ನೆಪದಲ್ಲಿ ಪ್ರಾಣಿ ಹಿಂಸೆ ಮಾಡುತ್ತಿದ್ದ ಆರೋಪಿ ತಂಡಕ್ಕೆ ಜವಾಬ್ದಾರಿಯುತ ಅಧಿಕಾರಿಯಾಗಿ Assistant conservator of forests (ACF) ಮದನ್ ಬುದ್ದಿವಾದ ಹೇಳಿದ್ದೇ ಬಂತು ಮದವೇರಿದ ದುಷ್ಕರ್ಮಿಗಳು ಅವರನ್ನು ಹಿಗ್ಗಾಮುಗ್ಗ ಥಳಿಸಿತ್ತು. ನಂತರ ಪ್ರಕರಣವನ್ನು ಮುಚ್ಚಿಹಾಕಲು ಸ್ಥಳೀಯ ಪೊಲೀಸರು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ದಾಂಡೇಲಿ ನಗರಸಭೆ ನೌಕರ ಅರವಿಂದ್ ಚವಾಣ್ ನದಿ ದಡದಲ್ಲಿದ್ದ ರೆಸಾರ್ಟಿನಲ್ಲಿ ತನ್ನ ತಂಡದೊಂದಿಗೆ ಮೋಜುಮಸ್ತಿಯಲ್ಲಿದ್ದ. ತಂಡದಲ್ಲಿ ಬಾಗಲಕೋಟೆಯ ಸಬ್‌ಇನ್ಸ್‌ಪೆಕ್ಟರ್ ಎಸ್ಆರ್ ನಾಯ್ಕ್, ಒಬ್ಬ ಸಹಾಯಕ ಸಬ್‌ಇನ್ಸ್‌ಪೆಕ್ಟರ್, ಭಗವತಿ ಹೈಸ್ಕೂಲಿನ ಶಿಕ್ಷಕಿ ಶೈಲಜಾ ನಾಯ್ಕ್ ಮತ್ತು ಕೆಇಬಿ ಇಂಜಿನಿಯರ್ ಆನಂದ್ ನಾಯ್ಕ್ ಇದ್ದರು ಎನ್ನಲಾಗಿದೆ.
ಇತ್ತ ಮದನ್ ನಾಯ್ಕ್ ದಾಂಡೇಲಿ ದಡದಲ್ಲಿರುವ ದಾಂಡೇಲಪ್ಪ ದೇವಸ್ಥಾನಕ್ಕೆ ಸಂಸಾರ ಸಮೇತ ಬಂದಿದ್ದರು. ಅದೇ ವೇಳೆ, ಅರವಿಂದ್ ಚವಾಣ್ ಮತ್ತು ಅವನ ತಂಡ ಕುಡಿದ ಮಸ್ತಿಯಲ್ಲಿ ಮೂಳೆ ಮಾಂಸಗಳನ್ನು ಮೊಸಳೆಗಳಿಗೆ ಹಾಕುತ್ತಾ, ಅದನ್ನು ಹಿಂಸಿಸುತ್ತಿದ್ದರು. ಮದನ್ ನಾಯ್ಕ್ ಇದಕ್ಕೆ ಆಕ್ಷೇಪಿಸಿದರು.
ಕುಪಿತಗೊಂಡ ತಂಡ ಅವರ ಮೇಲೆ ಏಕಾಏಕಿ ಮುಗಿಬಿದ್ದು, ಥಳಿಸಿದೆ. ನಾಯ್ಕ್ ಅವರ ಪತ್ನಿ ಸುಮತಿ, ಪುತ್ರ ಮತ್ತು ಇಬ್ಬರು ಪುತ್ರಿಯರು ಮದನ್ ನಾಯ್ಕ್ ಸಹಾಯಕ್ಕೆ ಧಾವಿಸಿದರು. ಆಗ ಪುಂಡರು ಅವರ ಮೇಲೂ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಸಂಬಂಧ ದಾಂಡೇಲಿ ಗ್ರಾಮಾಂತರ ಠಾಣೆ ಪೊಲೀಸರು ಆನಂದ ರೂಪ್ ಸಿಂಗ್ ನಾಯ್ಕ್, ಸುರೇಶ್ ಸಂಕರಪ್ಪ ನಾಯ್ಕ್, ಪ್ರಶಾಂತ್ ರಾಮ ಲಮಾಣಿ ಮತ್ತು ಅರವಿಂದ ಚವಾಣ್ ಅವರನ್ನು ಬಂಧಿಸಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬಾಗಲಕೋಟೆಯ ಸಬ್‌ಇನ್ಸ್‌ಪೆಕ್ಟರ್ ಎಸ್ಆರ್ ನಾಯ್ಕ್ ನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ರೆಸಾರ್ಟಿನಲ್ಲಿದ್ದ ಗುಡಿಸಲುಗಳಿಗೆ ಬೆಂಕಿಹಚ್ಚಿ ಪ್ರತಿಭಟಿಸಿದ್ದಾರೆ.












Click it and Unblock the Notifications