ಶಾಸಕನ ಮನೆಮುಂದೆ ಆತ್ಮಹತ್ಯೆಗೆ ಪ್ರೇಮಿಗಳ ಯತ್ನ

ಹೆಗ್ಗಡೆದೇವನಕೋಟೆ ಶಾಸಕ ಚಿಕ್ಕಣ್ಣ ಅವರ ಮನೆ ಎದುರಿಗೆ ಈ ಘಟನೆ ನಡೆದಿದೆ. ಪ್ರೇಮಿಗಳಿಬ್ಬರನ್ನು ಕೂಡಲೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೇಡ ಜನಾಂಗಕ್ಕೆ ಸೇರಿದ ಪ್ರೇಮಿಗಳು ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು. ಆದರೆ ಅವರ ಪ್ರೇಮಕ್ಕೆ ಮುಳ್ಳಾಗಿದ್ದು ಚಿಕ್ಕಣ್ಣ ಅವರ ಬೆಂಬಲಿಗ ಗ್ರಾಮ ಪಂಚಾಯತ್ ಸದಸ್ಯ ಚಂದ್ರು ಎಂಬಾತ. ಹುಡುಗ ಇನ್ನೊಂದು ರಾಜಕೀಯ ಪಕ್ಷಕ್ಕೆ ಹತ್ತಿರವಾಗಿದ್ದರಿಂದ ಚಂದ್ರು, ಆ ಹುಡುಗನನ್ನು ತಿರಸ್ಕರಿಸುವಂತೆ ಹುಡುಗಿಯ ಮನೆಯವರನ್ನು ಎಚ್ಚರಿಸಿದ್ದರು.
ಈ ಘಟನೆಯ ನಂತರ ಹುಡುಗಿಯ ತಂದೆ ಹುಡುಗಿಯನ್ನು ಥಳಿಸಿದ್ದರು. ಮನೆಯವರ ಬಲವಂತಕ್ಕೆ ಬಗ್ಗದ ಹುಡುಗಿ ಹುಡುಗನೊಂದಿಗೆ ಭಾನುವಾರ ಪರಾರಿಯಾಗಿದ್ದಾಳೆ. ಇದರಿಂದ ಮನನೊಂದಿದ್ದ ಹುಡುಗಿಯ ತಂದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಹುಡುಗನನ್ನೇ ದೋಷಿಯನ್ನಾಗಿ ಮಾಡಿದ ಚಂದ್ರು ಆತನನ್ನು ಜೈಲಿಗೆ ತಳ್ಳಿಸುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಬೆದರಿಕೆಗೆ ಹೆದರಿದ ಪ್ರೇಮಿಗಳಿಬ್ಬರು ಚಿಕ್ಕಣ್ಣ ಅವರ ಮನೆಯ ಮುಂದೆ ಆಗಮಿಸಿ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಮೈಸೂರಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications