ಮಗುವನ್ನು ಬಲಿ ತೆಗೆದುಕೊಂಡ ಕಲುಷಿತ ನೀರು

ಚಿಂತನಹಳ್ಳಿ ಗ್ರಾಮದಲ್ಲಿ ಕಳೆದ ಎಂಟು ದಿನಗಳಿಂದ ಕಲುಷಿತ ನೀರು ನಲ್ಲಿಯಲ್ಲಿ ಪೂರೈಕೆಯಾಗುತ್ತಿದೆ. ರವಿವಾರ ನಲ್ಲಿ ನೀರಿನಲ್ಲಿ ಹುಳಗಳು ಕೂಡ ಕಂಡು ಬಂದಿವೆ. ಆ ನೀರನ್ನು ಕುಡಿದ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ. ಕೆಲವರನ್ನು ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇಂಥ ಕೊಳಕು ನೀರನ್ನು ಕುಡಿಯುವುದಾದರೂ ಹೇಗೆ? ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕಲುಷಿತ ನೀರನ್ನು ಕುಡಿದ ಒಂದೂವರೆ ವರ್ಷದ ವೈಷ್ಣವಿ ಬಸವರಾಜ್ ಬುಧವಾರ ಮೃತಪಟ್ಟ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾತ್ರಿ 2 ಗಂಟೆಯಿಂದ ಬೆಳಗಿನ ಜಾವದವರೆಗೂ ಮಗುವಿಗೆ ವಾತಿ ಬೇಧಿ ಆಗುತ್ತಿತ್ತು. ಮಗುವನ್ನು ಬೆಳಿಗ್ಗೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟಿದೆ ಎಂದು ಪೋಷಕರು ಕಣ್ಣೀರುಗರೆಯುತ್ತಿದ್ದಾರೆ.
ವೈದ್ಯರೇ ಇಲ್ಲ : ಯಾದಗಿರಿ ಜಿಲ್ಲಾ ಆಸ್ಪತ್ರೆಗೆ 5 ಜನ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಸಮೀಪದ ಕಂದಕೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಮಾತ್ರವಲ್ಲ ಎಂದೂ ವೈದ್ಯರು ಇರುವುದಿಲ್ಲ. ಆರೋಗ್ಯ ಕೇಂದ್ರಕ್ಕೆ ಹೋದರೆ ಸರಿಯಾಗಿ ಚಿಕಿತ್ಸೆ ಕೊಡುತ್ತಿಲ್ಲ. ಇದ್ದ ಸಿಬ್ಬಂದಿಗಳು ಕೂಡ ರೋಗಿಗಳಿಗೆ ಚಿಕಿತ್ಸೆ ಕೊಡಲು ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪಿಸಿದ್ದಾರೆ.
ಇದಕ್ಕೆಲ್ಲಾ ಗ್ರಾಮ ಪಂಚಾಯಿತಿನೇ ಕಾರಣ. ಜನರಿಗೆ ಒಳ್ಳೆ ನೀರು ಕೊಡುವುದು ಬಿಟ್ಟು ಕಲುಷಿತ ನೀರು ನೀಡಿ, ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಬಿಜೆಪಿ ಕಾರ್ಯಕಾರಣಿ ಸದಸ್ಯೆ ನಾಗರತ್ನ ಕುಪ್ಪಿ ಆರೋಪ ಮಾಡಿದ್ದಾರೆ. ಚಿಂತನಹಳ್ಳಿ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡುತ್ತಾರೆ ಎಂದು ತಿಳಿದ ತಕ್ಷಣ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತುಕೊಂಡು ನೀರಿನ ಟ್ಯಾಂಕ್ ಶುದ್ಧೀಕರಿಸಿ, ಗ್ರಾಮದ ಚರಂಡಿ ಮೇಲೆ ಬ್ಲೀಚಿಂಗ್ ಪೌಡರ್ ಹಾಕಿ ತಮ್ಮ 'ಕರ್ತವ್ಯ' ಮೆರೆದಿದ್ದಾರೆ.
ಇದು ಯಾದಗಿರಿ ಕಥೆಯೊಂದೇ ಅಲ್ಲ. ಉತ್ತರ ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿದೆ. ಭೀಕರ ಬರಗಾಲದಿಂದ ಕೆರೆಕಟ್ಟೆಗಳು ಬತ್ತಿಹೋಗಿವೆ. ಇರುವ ನೀರನ್ನು ಶುದ್ಧೀಕರಿಸಲು ಅತಿಯಾದ ಕ್ಲೋರೋಫಾರಂ ಬಳಸುತ್ತಿರುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಜಾನುವಾರುಗಳು ಕೂಡ ಅನಾರೋಗ್ಯಕ್ಕೆ ಈಗಾಡುತ್ತಿವೆ. ಉತ್ತರ ಕರ್ನಾಟಕದಲ್ಲಿ ಪಾದಯಾತ್ರೆ ಕೈಗೊಂಡಿರುವ ಮಾಜಿ ಸಚಿವ ಬಿ ಶ್ರೀರಾಮುಲು ಅವರು ಈಗ ಯಾದಗಿರಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.












Click it and Unblock the Notifications