ಯಡಿಯೂರಪ್ಪಗೆ ಮತ್ತೆ ಹೈಕೋರ್ಟ್ ಕಂಟಕ

ಜೂನ್ 14ರಂದು ಪ್ರಕರಣದ ಸಂಬಂಧ ಯಡಿಯೂರಪ್ಪ ವಿರುದ್ಧ ವಿಚಾರಣೆ ನಡೆಯಲೆಂದು ದಿನಾಂಕವನ್ನು ನಿಗದಿಪಡಿಸಿ, ನ್ಯಾ.ಅಜಿತ್ ಗುಂಜಾ ಮತ್ತು ನ್ಯಾ. ನಾಗರತ್ನ ಅವರ ವಿಭಾಗೀಯ ಪೀಠ ಸೋಮವಾರ ಈ ಮಹತ್ವದ ತೀರ್ಪು ನೀಡಿದೆ.
2008ರಲ್ಲಿ ರಾಚೇನಹಳ್ಳಿಯಲ್ಲಿ 1.1 ಎಕರೆ ಜಮೀನು ಡಿನೋಟಿಫಿಕೇಶನ್ ಸಂಬಂಧ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ಸಿರಾಜಿನ್ ಬಾಷಾ ರಾಜ್ಯಪಾಲ ಭಾರದ್ವಾಜ್ ಅವರ ಅನುಮತಿ ಕೋರಿದ್ದರು. ಅದಕ್ಕೆ ರಾಜ್ಯಪಾಲರೂ ಅನುಮತಿ ನೀಡಿದ್ದರು.
ಆದರೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ರದ್ದುಪಡಿಸಬೇಕೆಂದು ಕೋರಿ ಯಡಿಯೂರಪ್ಪ ಹೈಕೋರ್ಟ್ ಮೊರೆಹೋಗಿದ್ದರು. ಮತ್ತೆ ಮುಖ್ಯಮಂತ್ರಿ ಪಟ್ಟಕ್ಕೇರಲು ಎಗರಾಡುತ್ತಿರುವ ಯಡಿಯೂರಪ್ಪಗೆ ಈಗ ಹೈಕೋರ್ಟ್ ತೀರ್ಪಿನಿಂದ ತೀವ್ರ ಹಿನ್ನಡೆಯಾಗಿದೆ. ಇದರ ಹೊರತಾಗಿಯೂ, ಸಿಎಂ ಪಟ್ಟಕ್ಕಾಗಿ ಹೈಕಮಾಂಡ್ ಮೇಲೆ ಪ್ರಭಾವ ಬೀರಲು ಯಡಿಯೂರಪ್ಪ ಇಂದು ಮಧ್ಯಾಹ್ನ ದೆಹಲಿಗೆ ಹೊರಟಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಕಾನೂನು ಇಕ್ಕಟ್ಟಿಗೆ ಸಿಲುಕಿಸುವ ಭರದಲ್ಲಿ ರಾಜ್ಯಪಾಲ ಭಾರದ್ವಾಜ್ ಅವರು ಜೆಡಿಎಸ್ ವಕ್ತಾರ ವೈಎಸ್ ವಿ ದತ್ತಾ ತಂದಿದ್ದ ದೂರಿಗೆ ಕಣ್ಣುಮುಚ್ಚಿಕೊಂಡು ಸಹಿ ಹಾಕಿದ್ದನ್ನು ವಜಾಗೊಳಿಸಿ, ಕಳೆದ ಜನವರಿಯಲ್ಲಿ ಯಡಿಯೂರಪ್ಪಗೆ ಫುಲ್ ರಿಲೀಫ್ ನೀಡಿದ್ದ ಹೈಕೋರ್ಟ್, ಈ ಬಾರಿ ಸಿರಾಜಿನ್ ಬಾಷಾ ಸಲ್ಲಿಸಿದ್ದ ಖಾಸಗಿ ದೂರಿಗೆ ಮಣೆ ಹಾಕಿದೆ.












Click it and Unblock the Notifications