ಬೆಳಗಾವಿ: ಮದುವೆ ಲಾರಿ ಘೋರ ಅಪಘಾತ 10 ಸಾವು
ರಾಮದುರ್ಗ (ಬೆಳಗಾವಿ), ಏ.16: ಮದುವೆ ದಿಬ್ಬಣದ ಲಾರಿಯೊಂದು ರಾಮದುರ್ಗ ತಾಲ್ಲೂಕಿನ ಸಾಲಹಳ್ಳಿ ಸಮೀಪ ಬೆಳಗಾವಿ- ಬಾಗಲಕೋಟೆ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಅಪಘಾತಕ್ಕೀಡಾಗಿ ಎಂಟು ಮಹಿಳೆಯರು ಸೇರಿ 10 ಮಂದಿ ಪ್ರಾಣ ಬಿಟ್ಟರು. ಇತರೆ 10 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ನತದೃಷ್ಟರು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮೂಲದವರು. ಒಟ್ಟು 40 ಮಂದಿ ಬೈಲಹೊಂಗಲ ತಾಲ್ಲೂಕಿನ ಮಾರಗನಕೊಪ್ಪದಲ್ಲಿ ಭಾನುವಾರ ನಡೆಯಲಿದ್ದ ಸೋಲಾಪುರದ ಶಾಂತಿ ನಗರದ ರವಿ ಗೊಳಸಂಗಿ ಅವರ ಮದುವೆಗೆ ಕ್ಯಾಂಟರ್‌ನಲ್ಲಿ ಬರುತ್ತಿದ್ದರು.

ಭಾನುವಾರ ಬೆಳಗ್ಗೆ 7.30 ರಲ್ಲಿ ಇಲ್ಲಿನ ಲೋಕಾಪುರ-ಯರಗಟ್ಟಿ ಸಮೀಪದ ಸಾಲಪುರದ ಬಳಿ ರಾಷ್ಟ್ರೀಯ ಹೆದ್ದಾರಿ-13ರಲ್ಲಿ ಜೋಳದ ಚೀಲಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸೋಲಾಪುರದ ಉಮಟಾ ನಾಕಾದ ಕಮಲಾ ಶಿವಾಜಿ ಸಾಳುಂಕೆ (50), ಭವಾನಿ ಪೇಟದ ಶಿವಬಾಯಿ ನಾಗನಾಥ ಸೇಂದ್ರೆ (70), ಕುರಡವಾಡೆಯ ವಿಮಲಾ ಬಾಬುರಾವ್ ವಾಡತೀಲೆ (60), ತುಳಜಾಪುರದ ಸುಮನಾಬಾಯಿ ಸೇಂದ್ರೆ (55), ಕಸ್ತೂರಿಬಾಯಿ ಸೈಮನ್ ಗೊಳಸಂಗಿ (40), ಕಾಂತಾಬಾಯಿ ಪಾಂಡುರಂಗ ವಾಡತೀಲೆ (50), ಪ್ರಭಾವತಿ ವಾಡತೀಲೆ (45), ಆಸೀಫ್ ಸುಲ್ತಾನ್ ಶೇಖ್ (25) ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ತೀವ್ರವಾಗಿ ಗಾಯಗೊಂಡ ನಂದಿನಿ ಗೊಳಸಂಗಿ (30) ಎಂಬುವವರು ಮುಧೋಳದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಬೆಳಗಾವಿ ಉತ್ತರ ವಲಯ ಡಿಜಿಪಿ ಕೆ.ಎಸ್.ಆರ್. ಚರಣರಡ್ಡಿ, ಎಸ್ಪಿ ಸಂದೀಪ ಪಾಟೀಲ ಬೈಲಹೊಂಗಲ ಡಿವೈಎಸ್‌ಪಿ ಎಸ್.ಬಿ.ಪಾಟೀಲ,ಬೈಲಹೊಂಗಲ ಪ್ರಭಾರಿ ಉಪ ವಿಭಾಗಾಧಿಕಾರಿ ಇಸ್ಲಾವುದ್ದೀನ ಗದ್ಯಾಳ,ರಾಮದುರ್ಗ ತಹಸೀಲ್ದಾರ ಗೀತಾ ಕೌಲಗಿ, ರಾಮದುರ್ಗ ಸಿಪಿಐ ಪ್ರಕಾಶ ನಾಯ್ಡು, ಸವದತ್ತಿ ಸಿಪಿಐ ಮಲ್ಲನಗೌಡ ನಾಯಕ, ಕಟಕೋಳ ಪಿಎಸ್‌ಐ ವಿಶ್ವನಾಥ ಕಬ್ಬೂರೆ ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ಪರಿಶೀಲನೆ ನಡೆಸಿದರು.












Click it and Unblock the Notifications