ಯಡ್ಡಿ ಸಿಎಂ ಆಗ್ತಾರೋ ಇಲ್ವೋ ಸನ್ಮಾನ ಖಾತ್ರಿ

ಎನ್‌ಇಎಸ್ ಮೈದಾನದಲ್ಲಿ ಮಾ.31 ರಂದು ಯಡಿಯೂರಪ್ಪ ಸನ್ಮಾನ ಸಮಾರಂಭಕ್ಕಾಗಿ ಇಡೀ ನಗರದ ಯಡಿಯೂರಪ್ಪ ಮಯವಾಗುತ್ತಿದೆ.
ನಗರದ ಬಹುತೇಕ ರಸ್ತೆಗಳಲ್ಲಿ ಯಡಿಯೂರಪ್ಪನವರ ಫ್ಲೆಕ್ಸ್‌ಗಳು, ಹೋರ್ಡಿಂಗ್ಸ್ ರಾರಾಜಿಸುತ್ತಿವೆ. ವೃತ್ತಗಳಲ್ಲಿ ಆಳೆತ್ತರದ ಕಟೌಟ್‌ಗಳು ತಲೆ ಎತ್ತಿದೆ. ಯಡಿಯೂರಪ್ಪನವರಿಗೆ ಅಭಿನಂದನೆ ಹೇಳಲು ಯದ್ವಾತದ್ವಾ ಪೈಪೋಟಿ ನಡೆದಿರುವಂತೆ ಕಂಡು ಬರುತ್ತಿದೆ. ಹಲವು ಸಂಘಟನೆಗಳು ಶುಭ ಹಾರೈಸಿ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.
ಹೈಕಮಾಂಡ್ ಗೆ ಮುಖಭಂಗ: ಆದರೆ ಯಾವುದೇ ಪ್ಲೆಕ್ಸ್‌ಗಳಲ್ಲಿಯೂ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್. ಈಶ್ವರಪ್ಪನ ಅಥವಾ ಮುಖ್ಯಮಂತ್ರಿ ಸದಾನಂದಗೌಡರ ಭಾವಚಿತ್ರವಿಲ್ಲ. ಕೊನೆಗೆ ಬಿಜೆಪಿ ಹೈಕಮಾಂಡ್ ನ ಯಾವೊಬ್ಬ ಮುಖಂಡರ ಚಿತ್ರಗಳೂ ಇಲ್ಲ. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದರಿಂದ ಕೇವಲ ಯಡಿಯೂರಪ್ಪನವರ ಭಾವಚಿತ್ರ ಮಾತ್ರ ಹಾಕಲಾಗಿದೆ ಎಂದು ಸಂಘಟಕರು ಹೇಳುತ್ತಾರೆ.
ಇದು ಕೇವಲ ಸನ್ಮಾನಕ್ಕೆ ಸೀಮಿತವಾಗಿಲ್ಲ. ಬದಲಾಗಿ ಇದೊಂದು ಬಲಪ್ರದರ್ಶನದ ವೇದಿಕೆಯಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಯಡಿಯೂರಪ್ಪ ತಮ್ಮ ತವರು ಕ್ಷೇತ್ರದಲ್ಲಿ ಶಕ್ತಿ ಪ್ರದರ್ಶನವನ್ನು ಯಶಸ್ವಿಯಾಗಿಯೇ ಮುಕ್ತಾಯಗೊಳಿಸುವ ಸಾಧ್ಯತೆ ಇದೆ.
ಬಿಜೆಪಿ ಏನಾದರೂ ಕೈ ಕೊಟ್ಟರೆ ಹೊಸ ಪಕ್ಷದ ಘೋಷಣೆ ಅಥವಾ ಖೇಣಿ ಪಕ್ಷ ಉದ್ಧಾರ ಮಾಡುವ ಬಗ್ಗೆ ಯಡಿಯೂರಪ್ಪ ನಿರ್ಧಾರ ಪ್ರಕಟಿಸುತ್ತಾರೆ ಎಂದು ಅವರ ಶಿವಮೊಗ್ಗದ ಅಭಿಮಾನಿಗಳು ನಂಬಿದ್ದಾರೆ.












Click it and Unblock the Notifications