ಯಡ್ಡಿಗೆ ಸಮ ಬತ್ತಿಯಿಟ್ಟ ಬಿಜೆಪಿ ಹಿರಿತಲೆಗಳು

ಸರಣಿ ಭೇಟಿಗಳು, ಸರ ಪಟಾಕಿಗಳು: ಕರ್ನಾಟಕ ಬಿಜೆಪಿ ಹಿರಿಯ ವೇದಿಕೆಯ ಗೌರವಾಧ್ಯಕ್ಷ ಬಿಬಿ ಶಿವಪ್ಪ ನೇತೃತ್ವದ ಹಿರಿಯರಿಗೆ ದೆಹಲಿಗೆ ಬರುವಂತೆ ಖುದ್ದು ಅಡ್ವಾಣಿಯವರೇ ಆಹ್ವಾನ ನೀಡಿದ್ದೇ ತಡ ಟೀಂ ಬಿಬಿ ದಡಗ್ಗನೆ ಎದ್ದು ದಿಲ್ಲಿಯತ್ತ ಧಾವಿಸಿದೆ. ನಿನ್ನೆಯಿಂದ (ಮಾರ್ಚ್ 27) ಬಿಬಿ ನೇತೃತ್ವದ ಟಿ. ಗೋವಿಂದಪ್ಪ, ಉರಿಮಜಲು ರಾಮಭಟ್, ನ್ಯಾಯವಾದಿ ದೊರೈರಾಜು, ಮಲ್ಲೇಶ್ ಹಾಗೂ ಅಣ್ಣಾ ವಿನಯಚಂದ್ರ ನಿಯೋಗವು ವರಿಷ್ಠರನ್ನು ಒಬ್ಬೊಬ್ಬರಾಗಿ ಭೇಟಿ ಮಾಡುತ್ತಿದ್ದಾರೆ.
ಇದು ಬಯಸದೆ ಬಂದ ಭಾಗ್ಯ ಎಂದು ಪರಿಗಣಿಸಿರುವ ಈ ಹಿರಿಯರು ಕಡ್ಡಿ ಮುರಿದಂತೆ ಯಡ್ಡಿಗೆ ಪತ್ತೆ ಪಟ್ಟಕಟ್ಟುವ ಅವಕಾಶವನ್ನು ಮುರಿದಿದ್ದಾರೆ. 'ಹಾಲಿ ಮುಖ್ಯಮಂತ್ರಿ ಸದಾನಂದಗೌಡರು ಇನ್ನೂ ಮೊನ್ನೆ ಮೊನ್ನೆ ಅಧಿಕಾರಕ್ಕೆ ಬಂದಿರುವುದು. ಅಷ್ಟಕ್ಕೂ ಅವರು ಉತ್ತಮ ಆಡಳಿತವನ್ನೇ ನೀಡುತ್ತಿದ್ದಾರೆ. ಅಂಥಾದ್ದರಲ್ಲಿ ಅವರ ಬದಲಾವಣೆ ಯಾಕೆ?' ಎಂದು ಪಕ್ಷದ ವರಿಷ್ಠರನ್ನು ಅಲವತ್ತುಕೊಂಡಿದ್ದಾರೆ.
ಇಷ್ಟು ದಿನ ಹೈಕಮಾಂಡ್ ತಮ್ಮನ್ನು ನಿರ್ಲಕ್ಷ್ಯಿಸಿದ್ದರೂ ಬೇಸರಿಸಿಕೊಳ್ಳದೆ ಈ ಹಿರಿಯರು 'ಇನ್ನಾದರೂ ಯಡಿಯೂರಪ್ಪಗೆ ಮಣೆ ಹಾಕಬೇಡಿ' ಎಂದೇ ಭಿನ್ನವಿಸಿಕೊಂಡಿದೆ. ರಾಮಭಟ್ಟರಂತೂ ತಮ್ಮ ಒಂದು ಕಾಲದ ಶಿಷ್ಯ ಸದಾನಂದರ ಪರ ಭರ್ಜರಿ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡಿಗೂ ಇದೇ report/ feedback ಬೇಕಿತ್ತು ಅನಿಸುತ್ತದೆ. 'ಆಯ್ತು ನೀವು ಹೇಳುತ್ತಿರುವುದು ಸರಿಯಾಗಿಯೇ ಇದೆ. ಸದಾನಂದರನ್ನು ಸದ್ಯಕ್ಕೆ ಬದಲಾಯಿಸುವುದಿಲ್ಲ. ಆ ಯಡಿಯೂರಪ್ಪನನ್ನು ಹೇಗೆ ಸಂಭಾಳಿಸಬೇಕು ಎಂಬುದು ನಮಗೆ ಗೊತ್ತಿದೆ. ನೀವು ಅದರ ಚಿಂತೆ ಬಿಡಿ' ಎಂದು ಹಿರಿಯರಿಗೆ ಅಭಯ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಮಂಗಳವಾರ ರಾತ್ರಿ ತಿಳಿಸಿವೆ. (ಸದಾನಂದರಿಗೆ ವರವಾದ ಆ ಒಂದು ಭೇಟಿ...)












Click it and Unblock the Notifications