ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದ ಜಾರಕಿಹೊಳಿ ಗ್ಯಾಂಗ್

ಇದರಿಂದಾಗಿ, ಈಗತಾನೆ ಕರ್ನಾಟಕ ಬಜೆಟ್ ಮಂಡಿಸಿ ನಿರಾಳರಾಗಿರುವ ಡಿವಿ ಸದಾನಂದ ಗೌಡರಿಂದ ಮುಖ್ಯಮಂತ್ರಿ ಪದವಿ ಕಸಿಕೊಳ್ಳಲು ಯತ್ನಿಸುತ್ತಿರುವ ಯಡಿಯೂರಪ್ಪನವರ ಬಣಕ್ಕೆ ಹಿನ್ನೆಡೆಯುಂಟಾಗಿದೆ. ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ, ಯಡಿಯೂರಪ್ಪ ವಿರುದ್ಧ ಸಿಡಿದೆದ್ದಿರುವ 20 ಜನ ಶಾಸಕರು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಜೊತೆಗೆ ಆನಂದ್ ಅಸ್ನೋಟಿಕರ್, ಸಾರ್ವಭೌಮ ಬಗಲಿ, ಗೂಳಿಹಟ್ಟಿ ಶೇಖರ್, ರಾಜು ಕಾಗೆ, ನಂಜುಂಡ ಸ್ವಾಮಿ, ನಾಗರಾಜ್ ಮುಂತಾದವರು, ಯಡಿಯೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡಿದರೆ ಸಾಮೂಹಿಕವಾಗಿ ರಾಜೀನಾಮೆ ನೀಡುವ ಬೆದರಿಕೆ ಒಡ್ಡಿದ್ದಾರೆ. 2010 ಸೆಪ್ಟೆಂಬರಲ್ಲಿ ಇದೇ ಶಾಸಕರ ದಂಡು ಯಡಿಯೂರಪ್ಪ ನಾಯಕತ್ವದ ವಿರುದ್ಧ ಸಿಡಿದೆದ್ದಿದ್ದರು.
ಈಶ್ವರಪ್ಪ ನೇತೃತ್ವದಲ್ಲಿ ಸಭೆ : ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಯಲ್ಲಿ ಆದ ಸೋಲು ಮತ್ತು ಯಡಿಯೂರಪ್ಪನವರಿಗೆ ಮತ್ತೆ ಮುಖ್ಯಮಂತ್ರಿ ಪಟ್ಟ ನೀಡುತ್ತಿರುವ ಸುದ್ದಿ ಸ್ಫೋಟಗೊಂಡಿರುವ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ತುರ್ತು ಸಭೆಯನ್ನು ಕರೆಯಲಾಗಿದೆ. ಸದಾನಂದ ಗೌಡ, ಸಿಟಿ ರವಿ, ಆರ್ಎಸ್ಎಸ್ ಮುಖಂಡ ಸಂತೋಷ್ ಮುಂತಾದವರು ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.
ದೆಹಲಿಗೆ ಯಡಿಯೂರಪ್ಪ : ಬಿಜೆಪಿಯ ಹಿರಿಯ ಅಧಿಕಾರಿಗಳಿಂದ ಬುಲಾವ್ ಬಂದಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ನವದೆಹಲಿಗೆ ದೌಡಾಯಿಸಿದ್ದಾರೆ. ಅವರನ್ನು ಕರೆಸಿಕೊಂಡಿರುವ ಕಾರಣ ನಿಖರವಾಗಿ ತಿಳಿದುಬಂದಿಲ್ಲವಾದರೂ, ಮತ್ತೆ ಪಟ್ಟ ಕೊಡಲೇಬೇಕೆಂಬ ಯಡಿಯೂರಪ್ಪನವರ ಪಟ್ಟಿಗೆ ಬಿಜೆಪಿ ಹೈಕಮಾಂಡ್ ಮಂಡಿಯೂರಿದೆ ಎಂಬ ಮಾತು ವಿಧಾನಸೌಧದ ಅಂಗಳದಲ್ಲಿ ಅಲೆದಾಡುತ್ತಿದೆ.












Click it and Unblock the Notifications