ಯಡಿಯೂರಪ್ಪ ಸಮಾವೇಶದ ಸಾಧನೆ RSSಗೆ ಟಾಂಗ್

ಕಳೆದ ಜನವರಿ ಅಂತ್ಯಕ್ಕೆ ಹುಬ್ಬಳ್ಳಿಯಲ್ಲಿ 'ಹಿಂದು ಶಕ್ತಿ ಸಂಗಮ'ದ ಹೆಸರಿನಲ್ಲಿ RSS, ಉತ್ತರ ಕರ್ನಾಟಕ ಪ್ರಾಂತದ ಸ್ವಯಂ ಸೇವಕರ ಮೂರು ದಿನಗಳ ಬೃಹತ್ ಸಮಾವೇಶ ಸಂಘಟಿಸಿತ್ತು. RSSನ ರಾಷ್ಟ್ರೀಯ ಪ್ರಮುಖರು ಪಾಲ್ಗೊಂಡಿದ್ದ ಸಭೆಗೆ ಮುಖ್ಯಮಂತ್ರಿ ಸದಾನಂದ ಗೌಡ, ಯಡಿಯೂರಪ್ಪ ಸೇರಿದಂತೆ ರಾಜ್ಯದ ಹಲವಾರು ಬಿಜೆಪಿ ಮುಖಂಡರು, ಸಚಿವರು ಸಮಾವೇಶಕ್ಕೆ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಸಂಘದ ವರಿಷ್ಠರು ಬಿಜೆಪಿ ಸರಕಾರದ ಹಲವು ಸಚಿವರ ಮೇಲಿನ ಭ್ರಷ್ಟಾಚಾರ ಆರೋಪಗಳು ಹಾಗೂ ಭಿನ್ನಮತ ಚಟುವಟಿಕೆಗಳ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆದರೆ ಈಗ ಅದೇ ನಗರದಲ್ಲಿ ಅಭಿನಂದನಾ ಸಮಾರಂಭದ ಹೆಸರಿನಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಯಡಿಯೂರಪ್ಪನವರ ಬೆಂಬಲಿಗರು ಮುಂದಾಗುವ ಮೂಲಕ ಸಂಘಕ್ಕೆ ಸಡ್ಡು ಹೊಡೆಯುವ ಪ್ರಯತ್ನ ಮಾಡಿದರು ಎನ್ನಲಾಗಿದೆ.
ಯಡಿಯೂರಪ್ಪನವರು ಎಲ್ಲಿಯೂ ನೇರವಾಗಿ ಕಾಣಿಸಿಕೊಳ್ಳದೆ ತಮ್ಮ ಬೆಂಬಲಿಗರ ಮೂಲಕ ಈ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎನ್ನಲಾಗಿದೆ. ಉತ್ತರ ಕರ್ನಾಟಕದಲ್ಲಿ ಆರೆಸ್ಸೆಸ್ ಹೆಚ್ಚು ಸಕ್ರಿಯ ಹಾಗೂ ವ್ಯಾಪಕವಾಗಿರುವುದರಿಂದ ಇಲ್ಲಿಂದಲೇ ಸಂಘಕ್ಕೆ ಸಡ್ಡು ಹೊಡೆಯುವ ಪ್ರಯತ್ನ ಇದರಲ್ಲಿ ಅಡಗಿದೆ ಎಂಬ ಮಾತುಗಳೂ ಇವೆ.












Click it and Unblock the Notifications