ಹುಟ್ಟುಹಬ್ಬದಂದು ಯಡ್ಡಿ ಏನನ್ನು ನಿರೀಕ್ಷಿಸುತ್ತಿದ್ದಾರೆ?

ಸದ್ಯಕ್ಕೆ ಬಿಜೆಪಿ ಹೈಕಮಾಂಡ್ ಪಾಲಿಗೆ ಮತ್ತು ಅವರ ಬೆಂಬಲಿಗರ ಪಾಲಿಗೆ ಚಿದಂಬರ ರಹಸ್ಯವಾಗಿರುವ ಯಡಿಯೂರಪ್ಪ ಅವರು ಪ್ರತಿದಿನ ಹೊಸಹೊಸ ಬೆಳವಣಿಗೆಗಳಿಗೆ ಕಾರಣರಾಗುತ್ತಿದ್ದಾರೆ. ಈ ಬೆಳವಣಿಗೆಯ ಭಾಗವಾಗಿ ಶನಿವಾರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ವಹಿಸಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅವರು ದಿಢೀರನೆ ಬೆಂಗಳೂರಿಗೆ ಆಗಮಿಸಿದ್ದಾರೆ.
ಯಡಿಯೂರಪ್ಪ, ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ಜೊತೆ ಇಂದು ಧರ್ಮೇಂದ್ರ ಪ್ರಧಾನ್ ಮಾತುಕತೆ ನಡೆಸಲಿದ್ದಾರೆ. ಇತರ ನಾಯಕರನ್ನು ಭೇಟಿ ಮಾಡುವ ಯಾವುದೇ ಕಾರ್ಯಕ್ರಮವನ್ನು ಅವರು ಹಮ್ಮಿಕೊಂಡಿಲ್ಲ. ಅವರು ಭೇಟಿ ಮಾಡುವ ಸ್ಥಳವನ್ನು ಕೂಡ ಗೌಪ್ಯವಾಗಿ ಇಡಲಾಗಿದೆ.
ಬಲ್ಲ ಮೂಲಗಳ ಪ್ರಕಾರ, ಕಗ್ಗಂಟಾಗಿರುವ ಕುರ್ಚಿ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನ್ ಅವರು ಬೆಂಗಳೂರಿಗೆ ಧಾವಿಸಿದ್ದಾರೆ. ಯಡಿಯೂರಪ್ಪನವರ ಕೆಲ ಬೆಂಬಲಿಗ ಸಚಿವರು ಶುಕ್ರವಾರ ಗೋವಾಗೆ ತೆರಳಿ ನಿತೀನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಈ ಸಮಸ್ಯೆಯ ಚಿಂತನೆಯ ಜೊತೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭೆ ಉಪಚುನಾವಣೆಯ ಪ್ರಚಾರದ ವಿವರಣೆಯನ್ನು ಪಡೆಯಲು ಅವರು ಬಂದಿದ್ದಾರೆ ಎನ್ನಲಾಗಿದೆ.












Click it and Unblock the Notifications