ಇದ್ದಿದ್ದು ಇದ್ದ ಹಾಗೆ ಹೇಳಿದ್ದು ತಪ್ಪಲ್ಲ: ಸದಾನಂದ

ಮುಖ್ಯಮಂತ್ರಿ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಜನತಾ ದರ್ಶನದ ನಂತರ ಮಾತನಾಡಿದ ಅವರು, ಬಿಎಸ್ ಯಡಿಯೂರಪ್ಪ ಬೆಂಬಲಿಗರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ ಬಗ್ಗೆ ಪ್ರಶ್ನಿಸಿದಾಗ ಮುಖ್ಯಮಂತ್ರಿ ಸದಾನಂದಗೌಡ ಈ ರೀತಿ ಪ್ರತಿಕ್ರಿಯಿಸಿದರು.
'ಶಾಸಕರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷದ ಅಧ್ಯಕ್ಷರು ಉತ್ತರಿಸುತ್ತಾರೆ. ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಶನ್ ಸೇರಿದಂತೆ ಎಂಟು ಪ್ರಕರಣಗಳು ಬಾಕಿ ಇದೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ನಾನು ಹೇಳಿರುವುದೂ ಸತ್ಯ. ಆ ಎಲ್ಲ ಪ್ರಕರಣಗಳೂ ಕಾನೂನಿನಡಿ ನಡೆಯುತ್ತವೆ. ನಾನು ನೀಡಿದ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಸದಾನಂದ ಗೌಡ ಹೇಳಿದರು.
'ಸರ್ಕಾರವನ್ನು ಮುನ್ನಡೆಸುವುದು, ಬಜೆಟ್ ಸಿದ್ಧತೆಗಳನ್ನು ಮಾಡಿಕೊಳ್ಳುವುದು, ಅಭಿವೃದ್ಧಿಗೆ ಸಂಬಂಧಿಸಿದ ಕೆಲಸ-ಕಾರ್ಯಗಳು ಮಾತ್ರ ನನ್ನ ವ್ಯಾಪ್ತಿಗೆ ಬರುತ್ತವೆ. ಇದಕ್ಕೆ ಸಂಬಂಧಿಸಿದ ವಿಚಾರಗಳಿಗೆ ಮಾತ್ರ ನಾನು ಪ್ರತಿಕ್ರಿಯಿಸುತ್ತೇನೆ' ಎಂದು ಸಿಎಂ ಡಿವಿಎಸ್ ಹೇಳಿದರು.
'ಅಷ್ಟಕ್ಕೂ ಯಡಿಯೂರಪ್ಪ ಅವರ ಮನಸ್ಸಿಗೆ ನೋವಾಗಲಿ ಎಂದು ನಾನು ಈ ಮಾತನ್ನು ಹೇಳಿಲ್ಲ. ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ ಎಷ್ಟು ಪ್ರಕರಣಗಳು ಬಾಕಿ ಇವೆ ಎನ್ನುವುದನ್ನು ಹೇಳಿದ್ದೇನಷ್ಟೇ' ಎಂದು ಸದಾನಂದ ಸ್ಪಷ್ಟಪಡಿಸಿದರು.
ಹೈಕಮಾಂಡ್ ಆದೇಶಕ್ಕೆ ಬದ್ಧ: ನಾಯಕತ್ವ ಬದಲಾವಣೆ ಕುರಿತು ಕೇಳಿದ ಪ್ರಶ್ನೆ ಉತ್ತರಿಸಿ, 'ಇದನ್ನು ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಸ್ವತಃ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ವಿಶ್ಲೇಷಣೆ, ಹೇಳಿಕೆ ನೀಡಬಾರದು ಎಂದೂ ಹೈಕಮಾಂಡ್ ಸೂಚಿಸಿದೆ. ಹಾಗಾಗಿ, ಅವರ ಆದೇಶಗಳಿಗೆ ನಾನು ಬದ್ಧ' ಎಂದು ಮುಖ್ಯಮಂತ್ರಿ ಸದಾನಂದ ತಿಳಿಸಿದರು.












Click it and Unblock the Notifications