ವಕೀಲರ ವಿರುದ್ಧ ಪೊಲೀಸ್, ಲಾಠಿ ವಿರುದ್ಧ ಕರಿಕೋಟ್

ಮಾ.2ರಂದು ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಅಂಗಳದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ವಕೀಲರನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಅಂದು ವಕೀಲರ ಮೇಲೆಯೂ ಪೊಲೀಸರಿಂದ ದಾಳಿ ಮಾಡಲಾಗಿದೆ, ವಕೀಲರ ಆಸ್ತಿಪಾಸ್ತಿಗೆ ಸಾಕಷ್ಟು ಹಾನಿಯಾಗಿವೆ. ನಮಗೂ ನ್ಯಾಯ ಕೊಡಿ ಎಂದು ವಕೀಲರು ಮುಷ್ಕರ ಮಾಡುತ್ತಿದ್ದಾರೆ.
ಕೆಲ ವಕೀಲರು ಈಗಾಗಲೆ ನ್ಯಾಯಾಲಯದ ಆವರಣದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ನಾಳೆ ಪ್ರತಿಭಟನೆ ತೀವ್ರಗೊಳಿಸುತ್ತಿದ್ದಾರೆ. ನಗರಕ್ಕೆ ಅನೇಕ ಜಿಲ್ಲೆಗಳಿಂದ ವಕೀಲರು ಬರುತ್ತಿದ್ದು, ಸಿಟಿ ಸಿವಿಲ್ ನ್ಯಾಯಾಲಯದಿಂದ ಕರ್ನಾಟಕ ಹೈಕೋರ್ಟ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ 9ವರೆಗೆ ನಗರದ ವಿವಿಧೆಡೆ ನಿಷೇಧಾಜ್ಞೆ ಹೇರಲಾಗುತ್ತಿದೆ. ವಿಡಂಬನೆಯೆಂದರೆ, ಪೊಲೀಸರ ವಿರುದ್ಧ ತಿರುಗಿಬಿದ್ದಿರುವ ವಕೀಲರಿಗೆ ಪೊಲೀಸರೇ ಭಾರೀ ಭದ್ರತೆ ಒದಗಿಸಬೇಕಾಗಿದೆ.
ವಕೀಲರು ತಮ್ಮ ನ್ಯಾಯಾಲಯ ಬಹಿಷ್ಕಾರವನ್ನು ಮುಂದುವರಿಸಿದ್ದು, ಶುಕ್ರವಾರವೂ ಕಲಾಪ ನಡೆಸದಿರಲು ನಿರ್ಧರಿಸಿದ್ದಾರೆ. ನ್ಯಾಯಾಲಯದ ಕಪಾಲಕ್ಕೆ ಅಡ್ಡಿ ಮಾಡಬಾರದು ಮತ್ತು ನ್ಯಾಯಾಲಯಕ್ಕೆ ಹಾಜರಾಗಿ, ಕಾನೂನುಬದ್ಧವಾಗಿ ಪ್ರತಿಭಟನೆ ಮುಂದುವರೆಸಬೇಕೆಂಬ ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಅವರ ಮನವಿಯನ್ನು ವಕೀಲರು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. ಬದಲಾಗಿ ಮುಖ್ಯ ನ್ಯಾಯಮೂರ್ತಿಗಳೂ ಪ್ರತಿಭಟನೆ ಬೆಂಬಲಿಸಬೇಕೆಂದು ಆಗ್ರಹಿಸಿದ್ದಾರೆ.
ಪೊಲೀಸರಿಂದ ಪ್ರತಿಭಟನೆ : ಪೊಲೀಸರ ವಿರುದ್ಧ ವಕೀಲರ ಪ್ರತಿಭಟನೆ ಒಂದೆಡೆಯಾದರೆ, ಇನ್ನೊಂದೆಡೆ ವಕೀಲರ ವಿರುದ್ಧ ಪೊಲೀಸರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಮಾರ್ಚ್ 2ರಂದು ನಡೆದ ಗಲಭೆಯಲ್ಲಿ ಪೊಲೀಸರ ಮೇಲೂ ದಾಳಿಯಾಗಿದೆ, ಅವರ ಮೇಲೆ ಸುಳ್ಳು ಕೇಸುಗಳನ್ನು ಜಡಿಯಲಾಗಿದೆ. ಸಾರ್ವಜನಿಕರಿಗೆ ಭದ್ರತೆ ಒದಗಿಸುತ್ತಿರುವ ಪೊಲೀಸರಿಗೇ ಭದ್ರತೆ ಇಲ್ಲದಂತಾಗಿದೆ ಎಂದು ಪೊಲೀಸರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಪೊಲೀಸರು ಶಾಂತಿಯುತ ಮತ್ತು ಸಾಂಕೇತಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಬೆಂಬಲವೂ ದೊರೆತಿದೆ ಎಂದು ಕರ್ನಾಟಕ ಪೊಲೀಸ್ ಸಂಘ ಹೇಳಿದೆ. ಗುರುವಾರ ಪೊಲೀಸ್ ಸಿಬ್ಬಂದಿಗಳ ಕುಟುಂಬದವರು ಪ್ರತಿಭಟನೆ ನಡೆಸಿದರೆ, ಶುಕ್ರವಾರ ಸಿಬ್ಬಂದಿಗಳೇ ಮುಷ್ಕರ ಹೂಡಲಿದ್ದಾರೆ. ಎಲ್ಲ ಪೊಲೀಸ್ ಸಿಬ್ಬಂದಿಗಳು ಕೈಗೆ ಕಪ್ಪುಪಟ್ಟಿ ಧರಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.












Click it and Unblock the Notifications