ಅನೈತಿಕ ಸಂಬಂಧದ ಸುಳಿಗೆ ಸಿಕ್ಕ ಎರಡು ನಾವೆಗಳು

ಬಂಧಿತವಾಗಿರುವ ಕುಮಾರ್ ಮತ್ತು ಆತನ ವಿರುದ್ಧ ದೂರು ನೀಡಿರುವ ಅಮಲಾ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರಿರುವ ಭೈರಸಂದ್ರದ ಮನೆಯ ಪಕ್ಕ ಕೆಲ ತಿಂಗಳ ಹಿಂದೆ ಈಗ ಬಂಧಿತಳಾಗಿರುವ ಸುಮಾ ಮತ್ತು ಅವಳ ಪತಿ ದಿನೇಶ್ ಬಂದು ನೆಲೆಸಲು ಶುರು ಮಾಡಿದರು. ಇಬ್ಬರ ಕುಟುಂಬದಲ್ಲಿಯೂ ಸಂಸಾರವೆಂಬ ದೋಣಿ ಸರಿಯಾಗಿ ತೇಲುತ್ತಿರಲಿಲ್ಲ.
ದಿನ ಕಳೆದಂತೆ ಕುಮಾರ್ ಪ್ರೀತಿಸುವ ಹೆಂಡತಿ ಇದ್ದರೂ ಸುಮಾಳ ಜೊತೆ ಕ್ರಮೇಣ ಸ್ನೇಹ, ಆತ್ಮೀಯತೆ, ಸಂಬಂಧ ಬೆಳೆಸಿಕೊಳ್ಳಲು ಶುರುಮಾಡಿದ್ದಾನೆ. ಅಷ್ಟರಲ್ಲಾಗಲೆ ಸುಮಾ ಕೂಡ ಗಂಡ ದಿನೇಶನನ್ನು ಮನೆಯಿಂದ ಓಡಿಸಿಬಿಟ್ಟಿದ್ದಳು. ವೈದ್ಯ ಹೇಳಿದ್ದು ಹಾಲು ಅನ್ನ ರೋಗಿ ಬಯಸಿದ್ದು ಹಾಲು ಅನ್ನ ಎಂಬಂತೆ ಸುಮಾ ಮತ್ತು ಕುಮಾರ್ ಅನೈತಿಕ ಚಟುವಟಿಕೆ ಶುರು ಮಾಡಿದ್ದಾರೆ.
ಇದರಿಂದ ರೋಸಿಹೋದ ಅಮಲಾ ಕೆಲ ದಿನಗಳ ಕಾಲ ಅಮ್ಮನ ಮನೆಗೆ ತೆರಳಿದ್ದಳು. ನಂತರ ರಾಜಿಯಾಗಿ ಗಂಡನ ಮನೆಗೆ ಮರಳಿ ಬಂದಿದ್ದಳು. ಆದರೂ, ಬಾಲ ನೆಟ್ಟಗೆ ಮಾಡಿಕೊಳ್ಳದ ಕುಮಾರ್ ಮತ್ತೆ ತನ್ನ ಹಳೆ ಚಾಳಿ ಶುರು ಹಚ್ಚಿಕೊಂಡಿದ್ದಾನೆ. ಗಂಡ ದಾರಿ ತಪ್ಪುತ್ತಿದ್ದುದನ್ನು ಮನಗಂಡ ಅಮಲಾ ಮಹಿಳಾ ಸಂಘಟನೆಗೆ ಇವರಿಬ್ಬರ ಅನೈತಿಕ ಸಂಬಂಧದ ಬಗ್ಗೆ ತಿಳಿಸಿದ್ದಾಳೆ.
ಮಹಿಳಾ ಸಂಘಟನೆಗಳು ಕೇಳಬೇಕೆ? ಕುಮಾರ್ ಮತ್ತು ಸುಮಾ ಇಬ್ಬರೂ ಒಟ್ಟಿಗಿದ್ದಾಗ ಮನೆಗೆ ನುಗ್ಗಿ ಇಬ್ಬರ ಕೂದಲು ಬಟ್ಟೆಗಳನ್ನು ಎಳೆದಾಡಿ, ಮನಸೋಇಚ್ಛೆ ಥಳಿಸಿದ್ದಾರೆ. ಇಷ್ಟಾಗಿಯೂ ಗಂಡ ಕುಮಾರ್ ಸುಮಾಳ ಜೊತೆಯೇ ಇರುವುದಾಗಿ ಹೇಳುತ್ತಿದ್ದಾನೆ. ಆದರೂ ಅಮಲಾ ಮಾತ್ರ ತನ್ನ ಗಂಡನ ಜೊತೆ ಇರುವುದಾಗಿ ಹೇಳುತ್ತಿದ್ದಾರೆ.
ಅಮಲಾ ಜೊತೆ ಬಾಳಲು ಇಷ್ಟವಿಲ್ಲದ ಕುಮಾರ್ ವಿಚ್ಛೇದನ ನೀಡದೆ ಪರಸ್ತ್ರೀಯೊಂದಿಗೆ ಬಾಳುವೆ ನಡೆಸಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕುಮಾರ್ ವಿರುದ್ಧ ಕೇಸು ಜಡಿಯಲಾಗಿದೆ. ಸುಮಾ ಕೂಡ ತನ್ನ ಗಂಡ ದಿನೇಶ್‌ನಿಗೆ ವಿಚ್ಛೇದನ ನೀಡದೆ ಪರಪುರುಷನೊಂದಿಗೆ ಚಕ್ಕಂದವಾಡಿದ್ದಕ್ಕಾಗಿ ಜೈಲು ಸೇರಿದ್ದಾಳೆ. ಇಬ್ಬರ ಸಂಸಾರಗಳು ಬಿರುಗಾಳಿಯ ಹೊಡೆತಕ್ಕೆ ಸಿಕ್ಕ ನಾವೆಗಳಂತಾಗಿವೆ.












Click it and Unblock the Notifications