ದ್ವಿಪತ್ನಿ ವಿವಾದ, ಕುಮಾರಸ್ವಾಮಿ ಮೇಲೆ ಪಿಐಎಲ್

ಮೊದಲ ಪತ್ನಿ ಅನಿತಾ ಬದುಕಿರುವಾಗಲೇ, ಚಿತ್ರನಟಿ ರಾಧಿಕಾರನ್ನು ಕುಮಾರಸ್ವಾಮಿ ವಿವಾಹವಾಗಿದ್ದಾರೆ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೆ ಕುಮಾರಸ್ವಾಮಿ ಎರಡನೇ ವಿವಾಹ ಮಾಡಿಕೊಂಡಿದ್ದು ಹಿಂದು ವಿವಾಹ ಕಾಯ್ದೆಗೆ ವಿರುದ್ಧವಾಗಿ ನಡೆದು ಕೊಂಡಿದ್ದಾರೆ. ಅಲ್ಲದೆ 2009ರ ಲೋಕಸಭಾ ಚುನಾವಣೆಯಲ್ಲಿ ಒಬ್ಬಳೇ ಪತ್ನಿಯೆಂದು ಸುಳ್ಳು ಮಾಹಿತಿ ಚುನಾವಣಾ ಆಯೋಗಕ್ಕೆ ನೀಡಿದ್ದಾರೆ ಎನ್ನುವುದು ಆರೋಪ.
ಚಿತ್ರನಟಿ ರಾಧಿಕಾ ಅವರನ್ನು ಕುಮಾರಸ್ವಾಮಿ ಎರಡನೇ ವಿವಾಹ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಮತ್ತು ರಾಧಿಕಾ ಮಂಗಳೂರು ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಕೂಡಾ ಮಾಡಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸುವಾಗ ನಾಮಪತ್ರದಲ್ಲಿ ಸುಳ್ಳು ಮಾಹಿತಿ ನೀಡಿರುವುದರಿಂದ ಅವರ ಲೋಕಸಭಾ ಸದಸ್ಯತ್ವವನ್ನು ರದ್ದು ಮಾಡಬೇಕು ಹಾಗೂ ಹಿಂದು ವಿವಾಹ ಕಾಯ್ದೆಯನ್ನು ಉಲ್ಲಂಘಿಸಿರುವುದರಿಂದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂದು ಶಶಿಧರ್ ಬೆಳಗುಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಒದಗಿಸಲು ಅರ್ಜಿದಾರರಿಗೆ ನಿರ್ದೇಶನ ನೀಡಿ ಮುಖ್ಯ ನ್ಯಾ | ವಿ.ಜೆ.ಸೆನ್ ಮತ್ತು ನ್ಯಾ | ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆಯನ್ನು ಫೆಬ್ರವರಿ ಮೂರಕ್ಕೆ ಮುಂದೂಡಿದೆ.












Click it and Unblock the Notifications