ಆಟೋ ಪಾಂಡುರಂಗನ ಪ್ರಾಮಾಣಿಕತೆಯ ಪರಾಕಾಷ್ಠೆ

ಅಂದಹಾಗೆ, ಬೆಂಗಳೂರು ಮಹಾಜನತೆಗೆ ಆಟೋ ಚಾಲಕರು ಅಂದರೆ ನಿಜಕ್ಕೂ ಭಾರಿ ತಲೆ ನೋವು. ಆದರೆ ಕೆಲ ಆಟೋ ಡ್ರೈವರುಗಳು ಪ್ರಾಮಾಣಿಕತೆಯನ್ನು ಆಗಾಗ ಪರಿಚಯಿಸುತ್ತಾ ಬಂದಿದ್ದಾರೆ ಎಂಬುದು ಸಮಾಧಾನಕರ.
ಜನವರಿ 14 ರ ರಾತ್ರಿ 11 ಗಂಟೆಯಲ್ಲಿ ಏನಾಯಿತೆಂದರೆ ಪವಮಾನಾಚಾರ್ಯ ಎಂಬುವರು ಆಟೋ ಡ್ರೈವರ್ ಪಾಂಡುರಂಗ ಅವರ ಆಟೋವನ್ನು ಕಾರ್ಪೊರೇಶನ್ ಬಳಿ ಹತ್ತಿದ್ದಾರೆ. ಆಟೋ ಹತ್ತುವಾಗ ಅವರ ಬಳಿ 5 ಲಕ್ಷ ರುಪಾಯಿ ತುಂಬಿದ್ದ ಚಿಕ್ಕ ಬ್ಯಾಗ್ ಸಹ ಇತ್ತು. ಅಲ್ಲಿಂದ ಮುಂದೆ ಆಚಾರ್ಯರನ್ನು ಹೊತ್ತ ಆಟೋ ಸೀದಾ ಹೋಗಿದ್ದ್ದು ಜೆಪಿ ನಗರದಲ್ಲಿರುವ ತಮ್ಮ ಮನೆಗೆ.
ಆದರೆ ಆಟೋದಲ್ಲಿ ಪ್ರಯಾಣಿಸುವಾಗ ಅವರ ಮನಸ್ಸು ದುಗುಡದಿಂದ ತುಂಬಿಕೊಂಡಿತ್ತು. ಕಾರಣ ತಮ್ಮೊಂದಿಗಿದ್ದ ಹಣದ ತುಂಬು ಚೀಲದ ಬಗ್ಗೆ ಅಲ್ಲ. (ಹೇಳಬೇಕು ಅಂದರೆ ಆ ಚೀಲವನ್ನೇ ಅವರು ಮರೆತು ಹೋಗಿದ್ದರು. ಯಡವಟ್ಟು ಆಗಿದ್ದೂ ಅದರಿಂದಲೇ!) ಬದಲಿಗೆ 15 ದಿನಗಳ ಹಿಂದೆ ತಿರುಪತಿಗೆ ಹೋಗುವಾಗ ರಸ್ತೆ ಅಪಘಾತದಲ್ಲಿ ಬಿಜಾಪುರದ ತಮ್ಮ ಗೆಳೆಯ, ಉದ್ಯಮಿ ಮಧು ಆಚಾರ್ಯ ಕಾಲು ಮುರಿದಿದ್ದರ ಬಗ್ಗೆ ಅವರಲ್ಲಿ ಆತಂಕ ಮನೆಮಾಡಿತ್ತು. ಮತ್ತು ಅವರ ಚಿಕಿತ್ಸೆಗಾಗಿ ಹಣ ಹೊಂದಿಸುವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿದ್ದರು. ಆದ್ದರಿಂದ ಕೂಲಾಗಿ ತಮ್ಮೊಂದಿಗಿದ್ದ ಹಣದ ಚೀಲವನ್ನೂ ಮರೆತಿದ್ದರು.
ಆದರೆ ಇದು ಚಾಲಕ ಪಾಂಡರುಂಗ ಗಮನಕ್ಕೂ ಬರಲಿಲ್ಲ. ಆತಂಕದ ವಿಷಯವೆಂದರೆ ಪವಮಾನಾಚಾರ್ಯ ಅವರ ನಂತರ ಪಾಂಡರುಂಗನ ಆಟೋ ಇನ್ನೂ ಮೂವರು ಪ್ರಯಾಣಿಕರಿಗೆ ಸೇವೆ ಒದಗಿಸಿದೆ. ಆದರೆ ಅವರವರದೇ ಚಿಂತೆಗಳಲ್ಲಿ ಮುಳಗಿದ್ದ ಯಾರೂ ಹಣದ ಚೀಲದ ಕಡೆ ಗಮನಹರಿಸಿಲ್ಲ, ಕೊನೆಗೆ at the fag end of the day ಪಾಂಡುರಂಗ ಸಹ!
ಬೆಳಗಿನಿಂದ ಎಲ್ಲ ಪ್ರಯಾಣಿಕರನ್ನು ಅವರವರು ತಲುಪಬೇಕಾದ ಗಮ್ಯವನ್ನು ತಲುಪಿಸಿದ ಸಂತೃಪ್ತಿಯಲ್ಲಿ ಪಾಂಡುರಂಗ ತಮ್ಮ ಆಟೋದೊಂದಿಗೆ ನಡುರಾತ್ರಿ 12.30ಕ್ಕೆ ಸಾರಕ್ಕಿಯಲ್ಲಿರುವ ಮಡದಿ, 2 ವರ್ಷದ ಮಗ, 2 ತಿಂಗಳ ಮಗು ಮತ್ತು ಹೆತ್ತಮ್ಮ ಇರುವ ಮನೆ ಸೇರಿಕೊಂಡಿದ್ದಾರೆ. ನಡುರಾತ್ರಿವರೆಗೂ ದುಡಿದು ಮಲಗಿದ್ದ ಮಗ ಪಾಂಡುರಂಗನನ್ನು ಬೆಳಗ್ಗೆ ಅವರಮ್ಮ ತಡವಾಗಿ ಆದರೆ ತಡಬಡಾಯಿಸಿ ಎಬ್ಬಿಸಿದಾಗಲೇ ಪಾಂಡುರಂಗನಿಗೆ ಹಣದ ಥೈಲಿ ಕಾಣಿಸಿಕೊಂಡಿದ್ದು. ಅವರಮ್ಮ ಆಟೋವನ್ನು ಕ್ಲೀನ್ ಮಾಡುವಾಗ ಹಿಂದಿನ ಸೀಟಿನ ಬಳಿಯಿದ್ದ ಚಿಕ್ಕ ಬ್ಯಾಗನ್ನು ತಂದು ಮಗನಿಗೆ ತಲುಪಿಸಿದ್ದರು. ಮತ್ತು ಪ್ರಮಾಣಿಕತೆಯ ಬೀಜವನ್ನು ಅಲ್ಲಿಂದಲೇ ನೆಟ್ಟಿದ್ದರು.
ತಾಯಿಯ ಕೈಯಲ್ಲಿದ್ದ ಹಣದ ಥೈಲಿ ನೋಡಿದ ತಕ್ಷಣ ಹಿಂದಿನ ರಾತ್ರಿ ಅತ್ಯಂತ ದುಗುಡದಿಂದ ತನ್ನ ಆಟೋದಲ್ಲಿ ಪ್ರಯಾಣಿಸಿದ್ದ ವಯೋವೃದ್ದರೊಬ್ಬರು ಪಾಂಡುರಂಗನ ಕಣ್ಣ ಮುಂದೆ ಹಾದು ಹೋಗಿದ್ದಾರೆ. ತಕ್ಷಣವೇ, ಥೈಲಿಯಲ್ಲಿ ಎಷ್ಟು ಹಣವಿದೆ ಎಂಬುದನ್ನು ಎಣಿಸುವ ಗೋಜಿಗೆ ಹೋಗದೆ, ಅದು ಆ ವಯೋವೃದ್ಧರದೇ ಹಣ ಎಂದು ಕರಾರುವಕ್ಕಾಗಿ ಎಣಿಸಿದ್ದ ಪಾಂಡುರಂಗ.
ಅಲ್ಲಿ ಇಲ್ಲಿ ಹುಡುಕಾಡಿ ಕೊನೆಗೆ ಹೇಗೋ ಪವಮಾನಾಚಾರ್ಯರ ಮನೆ ತಲುಪಿದ ಪಾಂಡರಂಗನನ್ನು ನೋಡಿದ ಆಚಾರ್ಯರು ಸಾಕ್ಷಾತ್ ಗುರು ರಾಘವೇಂದ್ರನನ್ನೇ ಕಂಡಂಷ್ಟು ಸಂತಸಪಟ್ಟಿದ್ದಾರೆ.
ಹಣ ಸಿಗುತ್ತಿದ್ದಂತೆ ಅಂಬಿಗನ ಸಹವಾಸವೇಕೆ ಎನ್ನುವಂತೆ ಸುಮ್ಮನಾಗದ ಪವಮಾನಾಚಾರ್ಯರು ನಾಲ್ಕು ಜನ ಪಾಂಡುರಂಗನನ್ನು ಸ್ಮರಿಸಲಿ ಎಂದು ಪಾಂಡುರಂಗನ ಪ್ರಮಾಣಿಕತೆಯನ್ನು ಪೊಲೀಸರಿಗೂ ಪರಿಚಯಿಸಿದ್ದಾರೆ.












Click it and Unblock the Notifications