ಡಿವಿಎಸ್ ಮುಂದುವರಿಕೆ:ಸುಬ್ರಹ್ಮಣ್ಯನಿಗೆ ಯಡಿಯೂರಪ್ಪ ಮೊರೆ

ಯಾವ ಅಮೃತ ಹಸ್ತದಿಂದ ಸದಾನಂದಗೌಡಗೆ ತಮ್ಮ ಅಧಿಕಾರ ಹಸ್ತಾಂತರಿಸಿದ್ದರೋ ಮತ್ತು ಅಧಿಕಾರ ಹಸ್ತಾಂತರಿಸಿದ ಘಳಿಗೆಯಿಂದಲೇ ಅವರ ಕುರ್ಚಿಗೆ ಕಂಟಕಪ್ರಾಯ ಎನಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರೇ ಮಂಗಳವಾರ ದೇವರಲ್ಲಿ ಈ ಮೊರೆಯಿಟ್ಟ ಮಹಾನುಭಾವ.
ಅಷ್ಟೇ ಸಾಲದು ಅಂತ ಯಡಿಯೂರಪ್ಪ ಅವರು ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರಲಿ ಎಂದೂ ದೇವರಲ್ಲಿ ಪ್ರಾರ್ಥಿಸಿದ್ದಾರೆ. ಅಷ್ಟೇ ಅಲ್ಲ; ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಹಿಡಿಯುವಂತಾಗಬೇಕು ಎಂದೂ ಅವರು ಕೋರಿದ್ದಾರೆ. ಇಷ್ಟೆಲ್ಲ ಇಷ್ಟಾರ್ಥಗಳು ಕೈಗೂಡುವ ನಿಟ್ಟಿನಲ್ಲಿ ತಾನು ಕೆಲಸ ಮಾಡುವುದಾಗಿಯೂ ಅವರು ಘೋಷಿಸಿದರು.
ಆದರೆ, ಜಮೀನು ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ಅನ್ನು ರದ್ದು ಮಾಡುವಂತೆ ಕೋರಿ ತಾವು ಸಲ್ಲಿಸಿರುವ ರಿಟ್ ಅರ್ಜಿ ಕುರಿತು ಹೈಕೋರ್ಟ್ ಬುಧವಾರ ನೀಡಲಿರುವ ತೀರ್ಪು ತಮ್ಮ ಪರವಾಗಲಿ ಎಂದೂ ಅವರು ಪ್ರಾರ್ಥಿಸಿರಲೂ ಬಹುದು.












Click it and Unblock the Notifications