ಕೊಲಂಬಿಯಾ-ಏಷ್ಯಾ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ

ಆಸ್ಪತ್ರೆಯ ಕೆಳಮಹಡಿಯಲ್ಲಿ ಇಡಲಾಗಿದ್ದ ಜೆನರೇಟರ್‌ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ರೋಗಿಗಳು ದಿಕ್ಕಾಪಾಲಾಗಿ ಓಡಲು ಪ್ರಾರಂಭಿಸಿದ್ದಾರೆ.
ಕೂಡಲೆ ಎಲ್ಲ ಹತ್ತಿರದ ಆಸ್ಪತ್ರೆಗಳಿಂದ ಆಂಬುಲನ್ಸ್‌ಗಳನ್ನು ಕರೆಯಿಸಿಕೊಂಡು 75 ರೋಗಿಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಆಸ್ಪತ್ರೆಯ ಚೇರ್ಮನ್ ಡಾ. ನಂದಕುಮಾರ್ ಜಯರಾಮ್ ಅವರು ಪತ್ರಕರ್ತರಿಗೆ ತಿಳಿಸಿದರು.
ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅನೇಕ ರೋಗಿಗಳು ಪ್ರಾಣಭಯದಿಂದ ಓಡಿದ್ದಾರೆ. ಸ್ಥಳಕ್ಕೆ ಮೂರು ಅಗ್ನಿ ಶಾಮಕ ವಾಹನಗಳು ಧಾವಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಈ ಘಟನೆಯಿಂದಾಗಿ ಸದಾ ಬಿಜಿಯಾಗಿರುವ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಸಂಭವಿಸಿದ್ದು, ಟ್ರಾಫಿಕ್ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಪರದಾಡುತ್ತಿದ್ದಾರೆ.
ಕಳೆದ ವರ್ಷ ಡಿ.9ರಂದು ಕೊಲ್ಕತಾದ ಎಎಂಆರ್‌ಐ ಆಸ್ಪತ್ರೆಯಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿ 91 ಜನರನ್ನು ಬಲಿ ತೆಗೆದುಕೊಂಡಿತ್ತು. ಆ ಘಟನೆ ಜನಮಾನಸದಲ್ಲಿ ಇನ್ನೂ ಹಸಿರಾಗಿರುವಾಗಲೇ ಈ ಘಟನೆ ಸಂಭವಿಸಿದ್ದು ಕರ್ನಾಟಕದ ಆಸ್ಪತ್ರೆಗಳ ರಕ್ಷಣಾ ವ್ಯವಸ್ಥೆಯನ್ನು ಮತ್ತೆ ಪರಿಶೀಲಿಸಲು ಸರಕಾರಕ್ಕೆ ಯೋಚಿಸುವಂತೆ ಮಾಡಿದೆ.












Click it and Unblock the Notifications