ಟ್ರಾಫಿಕ್ ರೂಲ್ಸ್ ಬ್ರೇಕ್: ಮಿರ್ಜಿ ಪುತ್ರರು ಮಾಡಿದ್ದೇನು?

ರಸ್ತೆಯಲ್ಲಿ ವಾಹನ ಚಲಾಯಿಸುತ್ತಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದಾರೆ. ಇಬ್ಬರೂ ಪ್ರತ್ಯೇಕ ಪ್ರಕರಣಗಳಲ್ಲಿ ಮೊಬೈಲ್ ನಲ್ಲಿ ಮಾತನಾಡುತ್ತಾ ಕಾರು ಚಲಾಯಿಸಿದ್ದಾರೆ. ಜತೆಗೆ ಇರಲಿ ಅಂತ ಸಿಗ್ನಲ್ ಜಂಪ್ ಸಹ ಮಾಡಿದ್ದಾರೆ. ಒಮ್ಮೆ ದೇವನಹಳ್ಳಿ ರಸ್ತೆಯಲ್ಲಿ ಓವರ್ ಸ್ಪೀಡಿಂಗ್ ಸಹ ಮಾಡಿದ್ದಾರೆ.
ನಗರದ ಮೊದಲ ಪೊಲೀಸ್ ಪ್ರಜೆ ಮಿರ್ಜಿ ಸಾಹೇಬರ ಪುತ್ರರೇ ಹೀಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದರೆ ಹೇಗೆ, ಅಲ್ವಾ? ಆಯುಕ್ತರ ಮಗನಾದರೇನು ಕಾನೂನು ಮೀರಿ ವರ್ತಿಸಬಹುದಾ? ಅವರಿಗೂ ಸರಿಯಾದ ಶಿಕ್ಷೆ, ದಂಡ ವಿಧಿಸಿ ಎಂದು ಜನ ಆಕ್ರೋಶದಿಂದ ಫರ್ಮಾನು ಹೊರಡಿಸುವುದು ಸಾಮಾನ್ಯ. ಆದರೆ
ನಿಲ್ಲಿ, ನಿಮ್ಮ ಆಲೋಚನೆ ಹಾಗಿರಲಿ. ಒಂದು ವೇಳೆ ನೀವೇ ಹೀಗೆ ಮಾಡಿದ್ದರೆ ಏನು ಮಾಡುತ್ತಿದ್ದಿರಿ. ಏನಿಲ್ಲ. ಇದ್ದರೆ ಮೂವತ್ತೆರಡೂ ಹಲ್ಲುಗಳನ್ನು ತೋರಿಸುತ್ತಾ, ಸ್ವಲ್ಪ ಅಡ್ಜಸ್ಟ್ ಮಾಡಿಕೊಳ್ಳಿ, ಸ್ವಾಮಿ ಎಂದು ಗೋಗರೆಯುತ್ತಿದ್ದಿರಿ. ಇಲ್ಲಾಂದ್ರೆ ಅಧಿಕಾರವಾಣಿಯಲ್ಲಿ 'ನಾನು ಯಾರು ಗೊತ್ತಾ? ಅಥವಾ ನಮ್ಮಪ್ಪ ಯಾರು ಗೊತ್ತಾ?' ಎಂದು ಪೊಲೀಸರಿಗೆ ಆವಾಜ್ ಹಾಕ್ತೀರಿ.
ಅಂಥಾದ್ದರಲ್ಲಿ ಸಾಕ್ಷಾತ್ ಆಯುಕ್ತರ ಪುತ್ರರಾಗಿ ಮಿರ್ಜಿ ಸಾಹೇಬರ ಪುತ್ರರು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ, ಮಾಡಿದ್ದೇನು ಗೊತ್ತಾ!? ಅವರು ಅಪ್ಪಿತಪ್ಪಿಯೂ ಅಪ್ಪನ ಹೆಸರನ್ನು ಎತ್ತಿಲ್ಲ. ರಸ್ತೆ ಮೇಲೆ ತಮ್ಮನ್ನು ತಡೆದು ನಿಲ್ಲಿಸಿದ ಪೊಲೀಸ್ ಮಾಮನಿಗೆ ತಪರಾಕಿ ಕೊಡಲಿಲ್ಲ. ಅಥವಾ ರೋಡ್ ರೇಗಣ್ಣರಾಗಲಿಲ್ಲ.
ತೆಪ್ಪಗೆ, ಹೌದು ಸ್ವಾಮಿ ನಮ್ಮಿಂದ ತಪ್ಪಾಯ್ತು. ಅದೆಷ್ಟು ದಂಡ ಕಟ್ಟಬೇಕೋ ಹೇಳಿ. ದಂಡ ಕಟ್ಟುತ್ತೇವೆ ಎಂದು ಹೇಳಿದ್ದೂ ಅಲ್ಲದೆ ರೂ 300, 100, 100 ದಂಡ ತೆತ್ತು, ದಂಡಪಿಂಡಗಳು ಅನಿಸಿಕೊಳ್ಳದೆ ತೆಪ್ಪಗೆ ತಾವಾಯಿತು, ತಮ್ಮ ಪಾಡಾಯ್ತು ಅಂತ ಮನೆ ಹಾದಿ ಹಿಡಿದಿದ್ದಾರೆ.
ಜತೆಗೆ ವಿಐಪಿ ಮಕ್ಕಳಿಗೆ ಅಮೂಲ್ಯ ಸಂದೇಶವನ್ನೂ ನೀಡಿದ್ದಾರೆ: ''ವಿಐಪಿ ಕಾರ್ಡ್ ಝಳಪಿಸಿ, ಪೌರುಷ ತೋರಿಸ ಬೇಡಿ. ಫಸ್ಟ್ ಅಫಾಲ್ ತಪ್ಪು ಮಾಡಬೇಡಿ. ಬೈ ಛಾನ್ಸ್ ಮಾಡಿದ್ದರೆ ತಪ್ಪನ್ನು ಒಪ್ಪಿಕೊಂಡು ಕಾನೂನುರೀತ್ಯ ನಡೆದುಕೊಳ್ಳಿ''. ಕೇಳಿಸ್ತಾ ಇದ್ಯಾ ಗಣ್ಯ ಮಕ್ಕಳೇ!?
ಅಷ್ಟಕ್ಕೂ ಮಿರ್ಜಿಯ ಈ ಇಬ್ಬರು ಸುಪುತ್ರರೂ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲವೇ? ಚಿರಂತನ ಉದ್ಯಮಿಯಾಗಿದ್ದಾರೆ. ಚಿನ್ಮಯ ಲಾಯರ್ ಆಗಿದ್ದಾರೆ. ಅಂದಹಾಗೆ, ಚಿಕ್ಕಂದಿನಿಂದಲೂ ತಮ್ಮಿಬ್ಬರೂ ಮಕ್ಕಳಿಬ್ಬರನ್ನೂ ಮಿರ್ಜಿ ಸಾಹೇಬರು ಹೀಗೇ ಖಡಕ್ ಆಗಿ ಬೆಳೆಸಿದ್ದಾರೆ. ಹ್ಯಾಟ್ಸ್ ಆಫ್ ಟು ಮಿರ್ಜಿ ಸಾಬ್.












Click it and Unblock the Notifications