ನಾಗರಿಕ ಸಮಸ್ಯೆಯೇ?: ಬಿಬಿಎಂಪಿ ಆಯುಕ್ತರಿಗೆ ಟ್ವೀಟ್ ಮಾಡಿ ಸಾಕು

ಹೌದು, ನಮ್ಮೀ ಎಂಕೆ ಶಂಕರಲಿಂಗೇಗೌಡರು ಯಾವುದೇ ಇಲಾಖೆಯ ಉಸ್ತುವಾರಿ ವಹಿಸಿಕೊಳ್ಳಲಿ ಅಲ್ಲಿ ಮೊದಲು ಆಧುನಿಕತೆಯ ಛಾಪು ಮೂಡಿಸುತ್ತಾರೆ. ಬಿಬಿಎಂಪಿಯಲ್ಲೂ ಅದನ್ನೇ ಮಾಡಿದ್ದಾರೆ. ಅಂದಹಾಗೆ, ಅಂದಿನ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಜತೆಗೂಡಿ ಬೆಂಗಳೂರಿಗೆ 'ಸಿಲಿಕಾನ್ ವ್ಯಾಲಿ' ಪಟ್ಟ ಕಟ್ಟಿಕೊಡುವಲ್ಲಿ ಶಂಕರಲಿಂಗೇಗೌಡರ ಪಾತ್ರ ಗಣನೀಯ.
ಬೆಂಗಳೂರು, ಸಿಲಿಕಾನ್ ವ್ಯಾಲಿ ಆಗಿ ಎಷ್ಟೋ ಯುಗಗಳೇ ಕಳೆದಿವೆ. ಅಂತಹುದರಲ್ಲಿ ಇಲ್ಲಿನ ಕಂಪ್ಯೂಟರ್ ಮಂದಿಗೆ ಬಿಬಿಎಂಪಿಯನ್ನು ಸಂಪರ್ಕಿಸಲು 'ಮೂಲ ಸೌಕರ್ಯ' ಕಲ್ಪಿಸದಿದ್ದರೆ ಹೇಗೆ? ಅದಕ್ಕಾಗಿ ಆಯುಕ್ತ ಶಂಕರಲಿಂಗೇಗೌಡರು bbmpcommr ಖಾತೆ ತೆರೆದಿದ್ದಾರೆ. ಈ ತಾಣದ ಮೂಲಕ ನೀವು ಟ್ವೀಟ್ ಮಾಡಿ, ನಿಮ್ಮ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಬಿಬಿಎಂಪಿಯ ಗಮನ ಸೆಳೆಯಬಹುದು.
ಬೆಂಗಳೂರನ್ನು ಶುದ್ಧ, ಸ್ವಚ್ಛ ನಗರವಾಗಿಸುವ ಸಂಕಲ್ಪ ತೊಟ್ಟಿರುವ ಆಯುಕ್ತರು twitter ಖಾತೆಯಲ್ಲಿ ಸಮಸ್ಯೆ ಕಾಣಿಸಿಕೊಂಡ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸಮಸ್ಯೆ ಬಗೆಹರಿಸುವ ಕೈಂಕರ್ಯ ಮಾಡುತ್ತಾರೆ.
ಅಷ್ಟೇ ಅಲ್ಲ. ಸಮಸ್ಯೆಯನ್ನು ಗಮನಕ್ಕೆ ತಂದ ನಾಗರಿಕಗೆ ಮರು ಟ್ವೀಟ್ ಮಾಡಿ, ಧನ್ಯವಾದವನ್ನೂ ಅರ್ಪಿಸುತ್ತಾರೆ. ಸೋ, ತಡವೇಕೆ? ಹೇಗೂ ಸಮಸ್ಯೆಗಳಿಗೇನೂ ಕೊರತೆಯಿಲ್ಲ. ಬಿಬಿಎಂಪಿ ಆಯುಕ್ತ ಶಂಕರಲಿಂಗೇಗೌಡರಿಗೆ ಒಂದು ಟ್ವೀಟ್ ಮಾಡಿ ಸಾಕು!











Click it and Unblock the Notifications